ರಾಜು ತಾಳಿಕೋಟಿ
ತಾಳಿಕೋಟೆ: ರಾಜು ತಾಳಿಕೋಟಿ ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ಸುದ್ದಿ ಸೋಮವಾರ ಪಟ್ಟಣಿಗರಿಗೆ ಬರಸಿಡಿಲು ಬಡಿದಂತೆ ಎರಗಿದ್ದು ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿತು. ಪಟ್ಟಣದಲ್ಲಿ ಸೂತಕದ ಛಾಯೆ ಆವರಿಸಿತು.
ಹೆತ್ತವರು ಇಟ್ಟ ಹೆಸರು ರಾಜೇಸಾಬ ಆದರೂ ಎಲ್ಲರಿಗೂ ಅವರು ಪ್ರೀತಿಯ ರಾಜು ಆಗಿದ್ದರು. ತಂದೆ ಮುಕ್ತುಮಸಾಬ್ ತಾಳಿಕೋಟಿಯವರ ನಾಲ್ಕು ಮಕ್ಕಳಲ್ಲಿ ಕೊನೆಯವರು. ಇಬ್ಬರು ಅಕ್ಕಂದಿರು ಒಬ್ಬ ಅಣ್ಣ, 11ನೆಯ ವಯಸ್ಸಿಗೆ ಹೆತ್ತವರನ್ನು ಕಳೆದುಕೊಂಡು ಓದು ಮೊಟಕಾಗಿ, ಹೊಟ್ಟೆಪಾಡಿಗಾಗಿ ಹೋಟೆಲ್‌ನಲ್ಲಿ ಸಪ್ಲೈಯರ್ ಅಲ್ಲದೆ ಲಾರಿ ಕ್ಲೀನರ್, ಚಿತ್ತರಗಿ ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ, ಪ್ರಚಾರ ಕಲಾವಿದನಾಗಿ, ಪರದೆ ಎಳೆಯುತ್ತ ಗ್ರೀನ್ ರೂಂ ಕಲಾವಿದರಾದರು.
ಪಾತ್ರಧಾರಿಯೊಬ್ಬ ಕೈ ಕೊಟ್ಟ ವೇಳೆ ಬಣ್ಣ ಹಚ್ಚಿದ ರಾಜು ಅವರು ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ. ಅವರೊಳಗಿನ ಕಲಾವಿದ ಬೆಳಕಿಗೆ ಬಂದಿದ್ದ. ತಂದೆ-ತಾಯಿ ಕಟ್ಟಿದ್ದ `ಖಾಸ್ಗತೇಶ್ವರ ನಾಟ್ಯ ಸಂಘ'ಕ್ಕೆ ಅಣ್ಣನ ಜೊತೆ ಸೇರಿ 1983ರಲ್ಲಿ ಮರುಜೀವ ತುಂಬಿದರು.
ಕುಡುಕರ ಜೀವನವನ್ನು ಹಾಸ್ಯವಾಗಿ ಚಿತ್ರಿಸಿದ `ಕಲಿಯುಗದ ಕುಡುಕ' ನಾಟಕ 40 ಸಾವಿರಕ್ಕೂ ಅಧಿಕ ಕಲಾಪ್ರದರ್ಶನ ಕಂಡಿತ್ತು. ಕುಡುಕ ವಿನ್ಯಾ ಆಗಿ ಸಂಭಾಷಣೆ, ನಟನೆಯಿಂದ ನಾಡಿನ ಕಲಾರಸಿಕರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಾಗ ಸಿನಿರಂಗ ಕೈ ಮಾಡಿ ಅವಕಾಶ ನೀಡಿತು.
ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದರೂ ತವರ ಪ್ರೀತಿ, ನೆಂಟಸ್ತಿಕೆ ಕಳೆದುಕೊಳ್ಳಲಿಲ್ಲ. ಜಾತಿ, ಧರ್ಮ ಮೀರಿ ಪಟ್ಟಣಿಗರ ಮನೆಯ ಮಗನಾಗಿ, ಪ್ರೀತಿಯ ರಾಜು ಆಗಿ ಬೆಳೆದಿದ್ದರು. ಮುಖಕ್ಕೆ ಬಣ್ಣ ಹಚ್ಚಿದ್ದರೂ ಅವರು ಜಾತಿಯ ಬಣ್ಣ ಬಳಿದುಕೊಳ್ಳಲೇ ಇಲ್ಲ.
ತಾಳಿಕೋಟೆ ಖಾಸ್ಗತೇಶ್ವರಮಠದ ಪ್ರಸಾದ ನಿಲಯದಲ್ಲಿದ್ದು ನಾಲ್ಕನೆಯ ತರಗತಿವರೆಗೆ ಓದಿ. ಆಗಲೇ ಸಂಗೀತಾಭ್ಯಾಸ ಮಾಡಿದ್ದರು. ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ಪರಮಭಕ್ತರಾಗಿದ್ದರು. ಪ್ರತಿ ವರ್ಷ ನಡೆಯುವ ಜಾತ್ರೆ ಹಾಗೂ ಸಂಗೀತಶಾಲೆಯ ಕಾರ್ಯಕ್ರಮಕ್ಕೆ ತಪ್ಪದೇ ಬರುತ್ತಿದ್ದರು. ಹಳೆಯ ಗೆಳೆಯರನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ.
ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರನ್ನೂ ಮಾತನಾಡಿಸುವ ಎಲ್ಲರಿಗೂ ಬೇಕಾದ ವ್ಯಕ್ತಿ ರಾಜು ಆಗಿದ್ದರು. ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರೊಂದಿಗೆ ಸೇರಿ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿಗೂ ದನಿಯಾಗಿ ಜೊತೆ ನೀಡಿದ್ದರು. ವಿಜಯನಗರದ ಯುದ್ಧದಲ್ಲಿ ತಾಳಿಕೋಟೆ ಕದನವೆಂದೇ ಖ್ಯಾತಿ ಪಡೆದ ಊರು ಕಲಾವಿದ ರಾಜು ತಾಳಿಕೋಟಿ ಅವರಿಂದ ನಾಡಿನಾದ್ಯಂತ ಮತ್ತೆ ಮುನ್ನೆಲೆಗೆ ಬಂದಿತ್ತು.
ಧಾರವಾಡದ ರಂಗಾಯಣದ ನಿರ್ದೇಶಕರಾಗಿ ಕಂಡಿದ್ದ ಅಭಿವೃದ್ಧಿ ಕನಸು ನನಸಾಗುವ ಮುನ್ನ ಇನ್ನಿಲ್ಲವಾದರೂ ಪಟ್ಟಣ ಹಾಗೂ ನಾಡಿನ ಕಲಾರಸಿಕರ ಮನದಲ್ಲಿ ಅಮರರಾಗಿ ಉಳಿಯಲಿದ್ದಾರೆ.