ADVERTISEMENT

ರೋಜಾಕ್ಕೆ ಸೀಮಿತವಾದ ರಂಜಾನ್‌: ಮನೆಯಲ್ಲೇ ಪ್ರಾರ್ಥನೆ, ನಡೆಯದ ಇಫ್ತಾರ್‌ ಕೂಟ

ಮನೆಯಲ್ಲೇ ಪ್ರಾರ್ಥನೆ, ನಡೆಯದ ಇಫ್ತಾರ್‌ಕೂಟ, ಖರೀದಿಯಾಗದ ಹೊಸ ಬಟ್ಟೆ

ಬಸವರಾಜ ಸಂಪಳ್ಳಿ
Published 11 ಮೇ 2021, 19:30 IST
Last Updated 11 ಮೇ 2021, 19:30 IST
ವಿಜಯಪುರ ನಗರದ ಖಾಜಾ ಅಮಿನ್‌ ದರ್ಗಾ ನಿವಾಸಿ, ಛಾಯಾಗ್ರಾಹಕ ರಾಜು ಢವಳಗಿ ಅವರ ಕುಟುಂಬದ ಸದಸ್ಯರು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿರುವುದು
ವಿಜಯಪುರ ನಗರದ ಖಾಜಾ ಅಮಿನ್‌ ದರ್ಗಾ ನಿವಾಸಿ, ಛಾಯಾಗ್ರಾಹಕ ರಾಜು ಢವಳಗಿ ಅವರ ಕುಟುಂಬದ ಸದಸ್ಯರು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿರುವುದು   

ವಿಜಯಪುರ: ಬಡವನಿರಲಿ, ಶ್ರೀಮಂತನಿರಲಿ ರಂಜಾನ್‌ ಮಾಸದಲ್ಲಿ ಪ್ರತಿ ಮುಸಲ್ಮಾನರ ಮನೆಯಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಸಹಜ. ರೋಜಾ ಆರಂಭ, ಮುಕ್ತಾಯದ ಸಮಯದಲ್ಲಿ ಅದೆಷ್ಟು ಖುಷಿ, ಕಲರವ ಆ ಮನೆಗಳಲ್ಲಿ ಇರುತ್ತಿದೆ ಎಂದರೆ ಸ್ವರ್ಗವೇ ಧರೆಗಳಿದಂತೆ.

ಹೊಸ ಬಟ್ಟೆಯನ್ನು ತೊಟ್ಟು,ಸುಗಂಧ(ಅತ್ತಾರ್‌)ವನ್ನು ಮೈಗೆ ಲೇಪಿಸಿಕೊಂಡು ಸಂಜೆಯ ಇಫ್ತಾರ್‌ಗೆ ಕುಟುಂಬದ ಸದಸ್ಯರೆಲ್ಲ ತಯಾರಾಗುವ ಪರಿ ಅಕ್ಕಪಕ್ಕದ ಅನ್ಯ ಸಮುದಾಯದವರನ್ನೂ ಆಕರ್ಷಿಸುವಂತಿರುತ್ತಿದೆ. ಆದರೆ, ಈ ವರ್ಷ ಕೋವಿಡ್‌ ಪರಿಣಾಮ ರಂಜಾನ್‌ ಮಾಸ ಹಾಗಿಲ್ಲ.

ಹೌದು, ಪ್ರತಿ ವರ್ಷದಂತೆ ಈ ವರ್ಷವೂ ‘ಮನೆಯೊಳಗಣ ರಂಜಾನ್‌’ ಕುರಿತು ವಿಶೇಷ ವರದಿಗಾಗಿ ವಿಜಯಪುರ ನಗರದ ಖಾಜಾ ಅಮಿನ್‌ ದರ್ಗಾ ನಿವಾಸಿ, ಛಾಯಾಗ್ರಾಹಕ ರಾಜು ಢವಳಗಿ ಅವರ ಮನೆಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂದ ವಾತಾವರಣ ಎಲ್ಲ ಮುಸ್ಲಿಮರ ಮನೆಯ ಪ್ರತಿಬಿಂಬದಂತೆ ತೋರಿತು.

ADVERTISEMENT

ಸುಣ್ಣ, ಬಣ್ಣ ಬಳಿದುಕೊಳ್ಳದ ಮನೆಯ ಗೋಡೆಗಳು, ಘಮಘಮಿಸಿದ ಅಡುಗೆ ಕೋಣೆ, ಹಳೇ ಬಟ್ಟೆಯಲ್ಲೇ ತಿರುಗಾಡುವ ಮಕ್ಕಳು, ಯುವಕರು, ಹಿರಿಯರು, ಮೆಹಂದಿ ಕಾಣದ ಹೆಣ್ಣು ಮಕ್ಕಳ ಬರಿಗೈಗಳು ಕಂಡವೇ ಹೊರತು, ಹಬ್ಬದ ಸಂಭ್ರಮ ಸೂಚಿಸುವ ಯಾವೊಂದು ಪ್ರತೀಕಗಳು ಅಲ್ಲಿ ಕಾಣಲಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜು ಢವಳಗಿ, ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್‌ ಅಂಗವಾಗಿ ರೋಜಾ (ಉಪವಾಸ) ಮಾಡುತ್ತಿದ್ದೇವೆ. ಆದರೆ, ಕೋವಿಡ್‌ ತಂದೊಡ್ಡಿರುವ ಸಂಕಷ್ಟದಿಂದಾಗಿ ಈ ಬಾರಿ ಹಬ್ಬದ ಸಡಗರ ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ವರ್ಷಗಳಲ್ಲಿ ರಂಜಾನ್‌ ಬಂತೆಂದರೆ ಮನೆಯಲ್ಲಿ ಅದೇನೋ ಸಡಗರ ಮನೆಮಾಡಿರುತ್ತಿತ್ತು. ವರ್ಷ ಪೂರ್ತಿ ಬಡತನ, ಹಸಿವು ಇದ್ದರೂ ರಂಜಾನ್‌ ಮಾಸದಲ್ಲಿ ಅದಾವುದಕ್ಕೂ ಅವಕಾಶವಿಲ್ಲದಂತೆ ಶ್ರೀಮಂತಿಕೆ ಭಾವ ಇರುತ್ತಿತ್ತು. ಮನೆಮಂದಿ ಹೊಸ ಬಟ್ಟೆ, ಚಪ್ಪಲಿ, ವೈವಿಧ್ಯಮ ಭಕ್ಷ್ಯಭೋಜನಕ್ಕಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗುತ್ತಿದ್ದೆವು.

ರಂಜಾನ್‌ ತಿಂಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ವಿಶೇಷ ಭಕ್ಷ್ಯ, ಭೋಜನ ಸಿದ್ಧಪಡಿಸಿ ಇಫ್ತಾರ್‌ ಕೂಟ ಆಯೋಜಿಸಲಾಗುತ್ತಿತ್ತು. ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಹೋಗಿಬರುವುದು ಇರುತ್ತಿತ್ತು. ಆದರೆ, ಈ ಬಾರಿ ಎಲ್ಲಿಯೂ ಒಂದೇ ಒಂದು ಇಫ್ತಾರ್‌ ಕೂಟಗಳು ನಡೆದಿಲ್ಲ.

ನೆರೆಹೊರೆಯಲ್ಲಿ ಕೋವಿಡ್‌ನಿಂದ ಸಾವು, ನೋವುಗಳು ಸಂಭವಿಸುತ್ತಿರುವುದರಿಂದ ಇಫ್ತಾರ್‌ ಕೂಟ, ಹೊಸ ಬಟ್ಟೆ ಖರೀದಿ ಸೇರಿದಂತೆ ಸಡಗರ ಸಂಭ್ರಮ ಸಂಪೂರ್ಣ ಸ್ಥಗಿತಗೊಳಿಸಿದ್ದೇವೆ. ಈ ಬಾರಿ ಹಬ್ಬ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿದೆ.

ಅಂಗಡಿ, ಮಳಿಗೆಗಳು ಬಾಗಿಲು ಮುಚ್ಚಿರುವುದರಿಂದ ಹೊಸ ಬಟ್ಟೆ, ಚಪ್ಪಲಿ ಖರೀದಿಗೆ ಅವಕಾಶವಿಲ್ಲದಂತಗಾದೆ. ಜೊತೆಗೆ ಲಾಕ್‌ಡೌನ್‌ ಪರಿಣಾಮ ದುಡಿಮೆಯೂ ಇಲ್ಲವಾಗಿದೆ. ಹೀಗಾಗಿ ಈ ವರ್ಷ ಹಳೇ ಬಟ್ಟೆಯನ್ನೇ ತೊಟ್ಟು ಹಬ್ಬ ಮಾಡುತ್ತೇವೆ. ಯಾರನ್ನೂ ಮನೆಗೆ ಆಹ್ವಾನಿಸುತ್ತಿಲ್ಲ. ನಾವೂ ಹೋಗುತ್ತಿಲ್ಲ.

ಪ್ರತಿ ದಿನ ರೋಜಾ ಮುಕ್ತಾಯವಾಗುವ ಸಂದರ್ಭದಲ್ಲಿ ಬಗೆಬಗೆಯ ಹಣ್ಣುಗಳು, ಡ್ರೈಫ್ರೂಟ್ಸ್‌, ವೈವಿಧ್ಯಮಯ ಖಾದ್ಯಗಳು ಇರುತ್ತಿದ್ದವು. ಆದರೆ, ಈ ವರ್ಷ ಅವಾವೂ ಇಲ್ಲ. ಕೇವಲ ಕರ್ಜೂರ, ನೀರನ್ನು ಸೇವಿಸುವ ಮೂಲಕ ರೋಜಾ ಮುಗಿಸುತ್ತಿದ್ದೇವೆ.

ಕೋವಿಡ್‌ ನಿರ್ಬಂಧ ಮತ್ತು ಆತಂಕ ಇರುವುದರಿಂದ ಯಾರೂ ಮಸೀದಿಗೆ ಹೋಗುತ್ತಿಲ್ಲ. ಮನೆಯಲ್ಲೇ ಐದು ಬಾರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್‌ ಸಂಕಷ್ಟದಿಂದ ಜನರನ್ನು ರಕ್ಷಿಸುವಂತೆ ಅಲ್ಲಾಹುವಿನಲ್ಲಿ ಪ್ರತಿ ನಿತ್ಯ ಬೇಡುತ್ತಿದ್ದೇವೆ ಎನ್ನುತ್ತಾರೆ ರಾಜು ಅವರ ಪತ್ನಿ ಬಿಸ್ಮಿಲಾ ಢವಳಗಿ.

ಸುತ್ತಮುತ್ತಲು ಬರೀ ಆತಂಕ, ಸಾವು, ನೋವಿನ ಸುದ್ದಿ ಆವರಿಸಿರುವುದರಿಂದ ಈ ಬಾರಿ ರಂಜಾನ್‌ ಮಾಸವು ಖುಷಿ ನೀಡಿಲ್ಲ. ರೋಜಾ ಸದ್ದುಗದ್ದಲವಿಲ್ಲದೇ ತಣ್ಣಗೆ ಮುಗಿದೇ ಹೋಗಿದೆ. ಈದ್ ಉಲ್‌ ಫಿತ್ರ್‌ ಆಚರಿಸಲೂ ಮನಸ್ಸಿಲ್ಲ ಎನ್ನುತ್ತಾರೆ ಅವರು.

ಹಬ್ಬಕ್ಕಾಗಿ ಮಾಡಬೇಕಾಗಿದ್ದ ಖರ್ಚು, ವೆಚ್ಚವನ್ನು ಈ ಬಾರಿ ಸಂಕಷ್ಟದಲ್ಲಿರುವ ಬಡವರಿಗೆ ಕೈಲಾದಷ್ಟು ನೆರವಾಗಲು ಮುಂದಾಗಿದ್ದೇನೆ ಎನ್ನುತ್ತಾರೆ ರಾಜು ಢವಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.