
ವಿಜಯಪುರ: ಪವಿತ್ರ ರಂಜಾನ್ ಮಾಸದಲ್ಲಿ ಖರ್ಜೂರಗಳಿಗೆ ವಿಶೇಷ ಮಹತ್ವ ಇರುವುದರಿಂದ ನಗರ ಮಾರುಕಟ್ಟೆಗೆ ವೈವಿಧ್ಯಮಯ ಖರ್ಜೂರಗಳು ದಾಂಗುಡಿ ಇಟ್ಟಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ. ರಂಜಾನ್ ಮಾಸದಲ್ಲಿ ಖರ್ಜೂರಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಖರ್ಜೂರ ವಹಿವಾಟು ನಡೆಯುತ್ತಿದೆ.
ಖರ್ಜೂರ ಎಷ್ಟು ಸಿಹಿಯಾಗಿವೆಯೋ ಅದರ ಬೆಲೆಯೂ ಸಹ ಅಷ್ಟೇ ಭರ್ಜರಿಯಾಗಿದ್ದು, ಪ್ರತಿ ಕೆ.ಜಿಗೆ ₹120ರಿಂದ ಆರಂಭವಾಗಿ ಗರಿಷ್ಠ ₹1500 ವರೆಗೆ ಮಾರಾಟವಾಗುತ್ತಿದೆ.
ರಂಜಾನ್ ಮಾಸದಲ್ಲಿ ಮುಸ್ಲಿಮರು ರೋಜಾ (ಉಪವಾಸ) ಆಚರಿಸುತ್ತಾರೆ. ರೋಜಾ ಆರಂಭಿಸುವ ಸಹರಿಯ ವೇಳೆಯಲ್ಲಿಯೂ ಖರ್ಜೂರ ಸೇವಿಸಲಾಗುತ್ತದೆ. ಅದೇ ರೀತಿ ಸೂರ್ಯಾಸ್ತದ ನಂತರ ರೋಜಾ ಬಿಡುವ ಇಫ್ತಾರ್ ಸಂದರ್ಭದಲ್ಲಿಯೂ ಖರ್ಜೂರ ಬಳಸುವ ಸಂಪ್ರದಾಯ ಇದೆ. ಖರ್ಜೂರದಿಂದಲೇ ರೋಜಾ ಬಿಡುವುದು ಉತ್ತಮ ಎಂಬ ನಂಬಿಕೆ ಇದೆ.
ಪೊಟ್ಯಾಸಿಯಂ, ಕಬ್ಬಿಣ, ಕಾರ್ಬೋಹೈಡ್ರೇಟ್ ಸೇರಿದಂತೆ ಅನೇಕ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಹೊಂದಿರುವ ಖರ್ಜೂರಗಳು ಆರೋಗ್ಯ ವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶಕ್ತಿ ನೀಡುವ ಆಹಾರವಾಗಿರುವ ಖರ್ಜೂರ ಉಪವಾಸದ ಬಳಿಕ ದೇಹಕ್ಕೆ ತಕ್ಷಣ ಶಕ್ತಿ ತುಂಬುವಲ್ಲಿ ಸಹಕಾರಿ ಎನ್ನಲಾಗಿದೆ.
ತರಹೇವಾರಿ ತಳಿಯ ಖರ್ಜೂರ
ವಿಜಯಪುರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ ಎದುರು ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ಖರ್ಜೂರ ಮಾರಾಟ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಸೌದಿ ಅರೇಬಿಯಾ, ದುಬೈ, ಇರಾನ್ ಮೊದಲಾದ ದೇಶಗಳಿಂದ ಆಮದು ಮಾಡಲಾಗುವ ವಿವಿಧ ಬಗೆಯ ಖರ್ಜೂರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ದೊಡ್ಡ ಗಾತ್ರದ, ತುಂಬಾ ಮೃದುವಾಗಿರುವ ಹಾಗೂ ಜೇನಿನಂತಹ ಸಿಹಿಯನ್ನು ಹೊಂದಿರುವ ಮೆಡ್ಜೂಲ್ ಖರ್ಜೂರ ಅತ್ಯಂತ ಜನಪ್ರಿಯವಾಗಿದೆ. ಸೌದಿ ಅರೇಬಿಯಾದಲ್ಲಿ ಬೆಳೆಯುವ ಕಪ್ಪು ಬಣ್ಣದ ಪೌಷ್ಟಿಕಾಂಶ ಸಮೃದ್ಧ ಅಜ್ವಾ ಖರ್ಜೂರಕ್ಕೂ ಹೆಚ್ಚಿನ ಬೇಡಿಕೆ ಇದೆ. ಒಣ ಸ್ವರೂಪದಲ್ಲಿರುವ ಡೆಗ್ಲೆಟ್ ನೂರ್, ಚಿಕ್ಕದಾದ, ದುಂಡಗಿನ ಹಾಗೂ ಅತ್ಯಂತ ಮೃದುವಾದ ಹಳದಿ ಬಣ್ಣದ ಬರ್ಹಿ, ಹೆಚ್ಚಿನ ನಾರಿನಂಶ ಮತ್ತು ಕ್ಯಾಲ್ಸಿಯಂ ಹೊಂದಿರುವ ಸಿಹಿಯಾದ ಸುಕ್ಕರಿ, ಅರೆ-ಒಣಗಿದ ಸ್ವರೂಪದ ಹಾಗೂ ದೀರ್ಘಕಾಲ ಸಂಗ್ರಹಿಸಬಹುದಾದ ಝಹದಿ, ಜೇನುತುಪ್ಪದಂತಹ ರುಚಿ ಹೊಂದಿರುವ ಮೃದು ಹಲಾವಿ ತಳಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಇನ್ನು ಮೆಡ್ಜೂಲ್ ತಳಿಯ ಖರ್ಜುರ ಪ್ರತಿ ಕೆಜಿಗೆ ಸುಮಾರು ₹1,500ಕ್ಕೆ ಮಾರಾಟವಾಗುತ್ತಿದ್ದರೆ, ಅಜ್ವಾ ಖರ್ಜೂರ ಪ್ರತಿ ಕೆಜಿಗೆ ₹1,100, ಕಲ್ಮಿ ತಳಿ ₹650 ದರದಲ್ಲಿದೆ. ಇದಲ್ಲದೆ, ಸಾಮಾನ್ಯ ತಳಿಯ ಖರ್ಜೂರಗಳು ₹120 ಪ್ರತಿ ಕೆಜಿಗೂ ದೊರೆಯುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.
ತಾವು ಇಷ್ಟಪಡುವ ಖರ್ಜೂರಗಳನ್ನು ಜನರು ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ ಸೌದಿ ಅರೇಬಿಯಾ ಇರಾನ್ ದುಬೈ ಮೂಲದಿಂದ ಖರ್ಜೂರಗಳನ್ನು ತರಿಸಲಾಗಿದೆ.- ಅಬೂಬಕರ್ ಬಾಗಾಯತ್, ಖರ್ಜೂರ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.