ADVERTISEMENT

ರಮ್ಜಾನ್‌ ‘ರೋಜಾ’ ವ್ರತಾಚರಣೆಗೆ ಚಾಲನೆ

ಕಡು ಬೇಸಿಗೆಯಲ್ಲೂ ಸತ್ವ ಪರೀಕ್ಷೆಗೆ ಸಜ್ಜಾದ ಮುಸ್ಲಿಮರು; ಇಂದಿನಿಂದ 14 ತಾಸು ಕಠೋರ ಉಪವಾಸ

ಡಿ.ಬಿ, ನಾಗರಾಜ
Published 6 ಮೇ 2019, 20:14 IST
Last Updated 6 ಮೇ 2019, 20:14 IST
ವಿಜಯಪುರದ ಅಲಿ ಮುರ್ತುಜಾ ಮಸೀದಿಯಲ್ಲಿ ಸೋಮವಾರ ತರಾವಿ ವಿಶೇಷ ಪ್ರಾರ್ಥನೆಗಾಗಿ ನಡೆದ ಅಂತಿಮ ಸಿದ್ಧತೆಯ ಚಿತ್ರಣಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಅಲಿ ಮುರ್ತುಜಾ ಮಸೀದಿಯಲ್ಲಿ ಸೋಮವಾರ ತರಾವಿ ವಿಶೇಷ ಪ್ರಾರ್ಥನೆಗಾಗಿ ನಡೆದ ಅಂತಿಮ ಸಿದ್ಧತೆಯ ಚಿತ್ರಣಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ:ಸೋಮವಾರ ಬಾನಂಗಳದಲ್ಲಿ ಚಂದ್ರ ದರ್ಶನವಾಗುತ್ತಿದ್ದಂತೆ, ವಿಜಯಪುರ ನಗರವೂ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದ ಮುಸ್ಲಿಮರ ಮನೆಗಳು, ಮಸೀದಿಗಳಲ್ಲಿ ರಮ್ಜಾನ್‌ ಮಾಸಾಚರಣೆ ಅಧಿಕೃತವಾಗಿ ಚಾಲನೆ ಪಡೆಯಿತು.

ರಾತ್ರಿ 8ರಿಂದ 10ಗಂಟೆವರೆಗೂ ಮಾಸಾಚರಣೆಯ ಮೊದಲ ವಿಶೇಷ ತರಾವಿ ಪ್ರಾರ್ಥನೆ ಜರುಗಿತು. ಮಂಗಳವಾರ ನಸುಕಿನ 4.32ಕ್ಕೆ ಜಿಲ್ಲೆಯಾದ್ಯಂಥಹ ಮೊದಲ ಸಹರಿ ಆರಂಭಗೊಂಡಿತು. ಮುಸ್ಸಂಜೆ 6.48ರ ಬಳಿಕ ಇಫ್ತಾರ್‌ ಆಯೋಜನೆಗೊಳ್ಳಲಿದೆ.

ಈ ಬಾರಿ ರಮ್ಜಾನ್‌ ಕಡು ಬೇಸಿಗೆಯಲ್ಲೇ ಬಂದಿದ್ದು, ವ್ರತಾಚರಣೆಗೆ ತಿಂಗಳಿನಿಂದ ನಡೆಸಿದ್ದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ತಲೆ ತಲಾಂತರದಿಂದಲೂ ನಡೆದು ಬಂದಿರುವ ಪರಂಪರೆಯನ್ನು ಚಾಚೂ ತಪ್ಪದೆ, ಧಾರ್ಮಿಕ ವಿಧಿಗಳಿಗೆ ಕಿಂಚಿತ್‌ ಲೋಪವಾಗದಂತೆ ಆಚರಿಸಲು ಮುಸ್ಲಿಮರು ಮಾನಸಿಕವಾಗಿ ಸಿದ್ಧರಾಗಿದ್ದಾರೆ.

ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 950ಕ್ಕೂ ಹೆಚ್ಚು ಮಸೀದಿಗಳಿದ್ದು, ರಮ್ಜಾನ್‌ ಮಾಸಾಚರಣೆಗಾಗಿ ಸಜ್ಜುಗೊಂಡಿವೆ. ಸುಣ್ಣ–ಬಣ್ಣದಿಂದ ಅಲಂಕೃತಗೊಂಡಿವೆ. ಪ್ರಾರ್ಥನೆಗಾಗಿ ವಿವಿಧೆಡೆಯಿಂದ ಬರುವವರ ಅನುಕೂಲಕ್ಕಾಗಿ ಭೀಕರ ಬರದಲ್ಲೂ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿವೆ.

ಹೊಸ ಜಮಾಖಾನಗಳ ಖರೀದಿ, ಹಳೆಯ ಜಮಾಖಾನಗಳನ್ನು ಒಗೆದು ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಇಫ್ತಾರ್‌ ಆಯೋಜನೆಯ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ಕ್ಯಾಲೆಂಡರ್‌ ಪ್ರಕಟಗೊಂಡಿದೆ.

ಮಸೀದಿಗಳು, ಮನೆಗಳು ಸೇರಿದಂತೆ ಪ್ರತಿಯೊಬ್ಬ ಮುಸ್ಲಿಂರ ಮನ ಮನವೂ ಪವಿತ್ರ ಕ್ಷಣಕ್ಕಾಗಿ ಕಾತರದಿಂದ ಕಾದಿದ್ದು, ‘ರೋಜಾ’ ಆಚರಣೆಗೆ ಚಾಲನೆ ನೀಡಿದ್ದಾರೆ. ಈ ಪವಿತ್ರ ಮಾಸದಲ್ಲಿ 30 ದಿನವೂ ರಾತ್ರಿ ವೇಳೆ ಮಸೀದಿಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಸಂದರ್ಭ ಕುರಾನ್‌ ಪಠಣ ನಡೆಯಲಿದೆ. ಈ ಬಾರಿ ಉತ್ತರ ಭಾರತದ ಹಾಫೀಜ್‌ಗಳಿಗಿಂತ, ಸ್ಥಳೀಯ ಹಾಫೀಜ್‌ಗಳ ಸಂಖ್ಯೆಯೇ ಹೆಚ್ಚಿದೆ ಎನ್ನುತ್ತಾರೆ ಮುಸ್ಲಿಂ ಮುಖಂಡ ಶಂಶುದ್ಧೀನ್‌ ಪಾಟೀಲ.

ಈ ಹಾಫೀಜ್‌ಗಳು ದೇಶದ ವಿವಿಧೆಡೆಯ ಮದರಸಾಗಳಲ್ಲಿ ಕುರಾನ್‌ ಧರ್ಮಗ್ರಂಥದ ಕುರಿತು ಆಳ ಅಧ್ಯಯನ ನಡೆಸಿದವರು. ಅಲ್ಲಾಹುನ ಸಂದೇಶಗಳನ್ನು ಬಾಯಿ ಪಾಠ ಮಾಡಿದವರು. ಈಗಾಗಲೇ ಯಾವ್ಯಾವ ಮಸೀದಿ ಎಂಬುದನ್ನು ನಿಗದಿಪಡಿಸಿಕೊಂಡು ಬೀಡು ಬಿಟ್ಟಿದ್ದಾರೆ.

ಸೋಮವಾರ ರಾತ್ರಿಯಿಂದಲೇ ಇವರ ಧಾರ್ಮಿಕ ಕಾರ್ಯ ಚಾಲನೆಗೊಂಡಿದೆ. ಧರ್ಮಗ್ರಂಥದಲ್ಲಿರುವ ಅಲ್ಲಾಹುನ ಸಂದೇಶವನ್ನು ಸಂಪೂರ್ಣವಾಗಿ ಪ್ರತಿಯೊಬ್ಬ ಮುಸ್ಲಿಮನಿಗೂ ತಲುಪಿಸುವ ಪವಿತ್ರ ಕಾರ್ಯವನ್ನು ಇವರು ನಿರ್ವಹಿಸುತ್ತಾರೆ ಎಂದು ಸಮಾಜದ ಮುಖಂಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರೋಜಾ ವ್ರತಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಒಂದೂವರೆ ದಶಕದ ಅವಧಿಯಲ್ಲಿ ಈ ಬಾರಿ ಕಡು ಬೇಸಿಗೆಯಲ್ಲೇ ರಮ್ಜಾನ್ ಆರಂಭಗೊಂಡಿದೆ. ನೆತ್ತಿ ಸುಡುವ ಕೆಂಡದಂಥಹ ಬಿಸಿಲ ಬೇಗೆಯಲ್ಲೂ 14 ತಾಸಿಗೂ ಹೆಚ್ಚಿನ ಅವಧಿ ಗುಟುಕು ನೀರು ಕುಡಿಯದೆ, ಅಲ್ಲಾಹುನ ಆಜ್ಞೆ ಪಾಲನೆಗೆ ಮುಸ್ಲಿಂ ಸಮಾಜ ಸಿದ್ಧವಾಗಿದೆ. ಅಕ್ಷರಶಃ ಈ ಬಾರಿಯ ರಮ್ಜಾನ್‌ ಕಠೋರ, ಕಠಿಣವಾದದು’ ಎಂದು ಹೇಳಿದರು.

ಅಂಕಿ–ಅಂಶ

800 ಮಸೀದಿ ಜಿಲ್ಲೆಯಲ್ಲಿ

150 ಮಸೀದಿ ನಗರದಲ್ಲಿ

ಸೋಮವಾರ ಬಾನಂಗಳದಲ್ಲಿ ಚಂದ್ರದರ್ಶನ

ಮಂಗಳವಾರ ಮೊದಲ ರೋಜಾ

ಮುಸ್ಲಿಮರ ಮನದಲ್ಲಿ ಸಂಭ್ರಮ

ಮಸೀದಿಗಳ ಸುತ್ತಲೂ ಹಣ್ಣಿನ ಅಂಗಡಿ..!

ರಮ್ಜಾನ್‌ ಮಾಸಾಚರಣೆಗೆ ಚಾಲನೆ ದೊರಕುತ್ತಿದ್ದಂತೆ, ವ್ಯಾಪಾರಿಗಳು ಸಹ ಭರ್ಜರಿ ವ್ಯಾಪಾರ ನಡೆಸಲು ಮಸೀದಿಗಳ ಸುತ್ತಲೂ ಆಯಕಟ್ಟಿನ ಜಾಗ ಹಿಡಿದಿದ್ದಾರೆ.

‘ರೋಜಾ’ ಮುಗಿದ ನಂತರ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ಇಫ್ತಾರ್‌ನಲ್ಲಿ ಹಣ್ಣು, ಕರ್ಜೂರ ಸೇರಿದಂತೆ ಒಣ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಬಿಡುವವರೇ ಹೆಚ್ಚು. ಈ ಸಂದರ್ಭ ಮಸೀದಿ ಹೊರಭಾಗದಲ್ಲೇ ಸಿಗುವ ಅಲ್ಪೋಪಹಾರ ಖರೀದಿಸುವವರು ಅಧಿಕ. ಇದನ್ನರಿತಿರುವ ಬಾಳೆಹಣ್ಣು, ಕಲ್ಲಂಗಡಿ ಸೇರಿದಂತೆ ಇನ್ನಿತರೆ ಮಾರಾಟಗಾರರು ಮಸೀದಿ ಸುತ್ತ ಆಯಕಟ್ಟಿನ ಜಾಗ ನಿರ್ಮಿಸಿಕೊಂಡಿದ್ದಾರೆ.

‘30 ದಿನ ಭರ್ಜರಿ ವಹಿವಾಟು ನಡೆಯಲಿದೆ. ಇಡೀ ದಿನ ನಡೆಯುವ ವಹಿವಾಟು ಒಂದು ತಾಸಿನಲ್ಲಿ ನಡೆಯುತ್ತದೆ. ನಮ್ಮ ಪಾಲಿಗೆ ರಮ್ಜಾನ್‌ ಅಧಿಕ ಲಾಭ ನೀಡುವ ಮಾಸ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಆಸೀಫ್‌ ಬಾಗವಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.