ಬಸವನಬಾಗೇವಾಡಿ: ಪಟ್ಟಣದಲ್ಲಿ ಬಸವೇಶ್ವರ ಸೇವಾಸಮಿತಿ ನೇತೃತ್ವದಲ್ಲಿ ಬುಧವಾರ ರಂಗಪಂಚಮಿ ಅಂಗವಾಗಿ ನಡೆದ ಬಣ್ಣದಾಟದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸ್ಥಳೀಯ ವಿರಕ್ತ ಮಠದ ಸಿದ್ಧಲಿಂಗಸ್ವಾಮೀಜಿ ಹಾಗೂ ಪದ್ಮರಾಜ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಣ್ಣದ ಹಬ್ಬಕ್ಕೆ ಚಾಲನೆ ನೀಡಲಾಯಿತು. ಮಕ್ಕಳು, ಯುವಕರು, ಹಿರಿಯರು ಬಣ್ಣದಾಟವಾಡಿ ಸಂಭ್ರಮಿಸಿದರು.
ಟ್ರ್ಯಾಕ್ಟರ್‌ನಲ್ಲಿ ಬಣ್ಣದ ನೀರನ್ನು ತುಂಬಿದ ಬ್ಯಾರಲ್ ಇಟ್ಟುಕೊಂಡು ಸುತ್ತಮುತ್ತ ನೆರೆದ ಜನರಿಗೆ ಎರಚುತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸ್ನೇಹಿತರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಪಟ್ಟರು.
ಹಿರಿಯರು ತಮಟೆ ನಾದಕ್ಕೆ ಹೆಜ್ಜೆ ಹಾಕಿದರೆ, ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪಟ್ಟಣದ ಬಸವಜನ್ಮ ಸ್ಮಾರಕ ಮುಂಭಾಗದ ರಸ್ತೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ರೇನ್ ಡಾನ್ಸ್ ಆಯೋಜಿಸಿತ್ತು. ಮಕ್ಕಳು ಯುವಕರು ಬಣ್ಣದ ನೀರಿನಲ್ಲಿ ಮಿಂದೆದ್ದರು. ಯುವಕರ ಗುಂಪು ಬೈಕ್ ಮೇಲೆ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣಹಚ್ಚಿತು. ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಲೋಕನಾಥ ಅಗರವಾಲ, ಸಂಗನಗೌಡ ಚಿಕ್ಕೊಂಡ, ಶೇಖರ ಗೊಳಸಂಗಿ, ಭರತ ಅಗರವಾಲ, ಬಸವರಾಜ ಗೊಳಸಂಗಿ, ಬಸವರಾಜ ಕೋಟಿ, ಶಂಕರಗೌಡ ಬಿರಾದಾರ, ಮಹಾಂತೇಶ ಆದಿಗೊಂಡ, ಬಿ.ಕೆ.ಕಲ್ಲೂರ, ಅಶೋಕ ಹಾರಿವಾಳ, ರವಿ ರಾಠೋಡ, ದಯಾನಂದ ಜಾಲಗೇರಿ, ಸಂಗಯ್ಯ ಕಾಳಹಸ್ತೇಶ್ವರಮಠ, ರವಿ ಚಿಕ್ಕೊಂಡ, ರವಿ ಪಟ್ಟಣಶೆಟ್ಟಿ, ಸಂಗಮೇಶ ಓಲೇಕಾರ, ಅಶೋಕ ಗುಳೇದ, ಜಟ್ಟಿಂಗರಾಯ ಮಾಲಗಾರ, ಪ್ರವೀಣ ಪೂಜಾರಿ, ಗುರಲಿಂಗ ಬಸರಕೋಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.