
ವಿಜಯಪುರ: ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಹತ್ತಾರು ಕಲಾ ತಂಡಗಳ ಕಲಾ ವೈಭವ, ಜೈ ಚನ್ನಮ್ಮಾ ಎಂಬ ಶಲ್ಯ ಧರಿಸಿದ ಸಾವಿರಾರು ಯುವಕರ ದಂಡು, ಮುಗಿಲು ಮುಟ್ಟಿದ ಜೈ ಚನ್ಮಮ್ಮಾ ಎಂಬ ಜಯ ಘೋಷ....
ವಿಜಯಪುರದಲ್ಲಿ ರಾಣಿ ಚನ್ನಮ್ನ ಅವರ 247 ನೇ ಜಯಂತೋತ್ಸವ ಹಾಗೂ 201ನೇ ವಿಜಯೋತ್ಸವ ಪ್ರಯುಕ್ತ ನಡೆದ ಭವ್ಯ ಮೆರವಣಿಗೆಯ ದೃಶ್ಯಗಳಿವು.
ಕರ್ನಾಟಕ ರಾಜ್ಯ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಭಾನುವಾರ ಆಯೋಜಿಸಲಾದ ಭವ್ಯ ಮೆರವಣಿಗೆ ವೈಭವೋಪೇರಿತವಾಗಿ ನಡೆಯಿತು.
ಮಹಿಳಾ ಡೊಳ್ಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ರಾಣಿ ಚನ್ನಮ್ಮ ಅವರ ಶೌರ್ಯ, ದೇಶಾಭಿಮಾನ ಸಾರುವ ಗೀತೆಗಳು ಮೆರವಣಿಗೆಯುದ್ದಕ್ಕೂ ಅನುರುಣಿಸಿದವು. ವಿವಿಧ ಕಲಾ ತಂಡಗಳ ವಾದ್ಯಗಳಿಂದ ಮೊಳಗಿದ ಸದ್ದು ಹೊಸ ಉತ್ಸಾಹ ಮೊಳಗಿಸಿತು.
ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಗಾಂಧಿ ವೃತ್ತ ಮೂಲಕ ಸಾಗಿ ಕೇಂದ್ರ ಬಸ್ ನಿಲ್ದಾಣ ಎದುರು ಇರುವ ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಬಬಲೇಶ್ವರ ಬ್ರಹ್ಮನ ಮಠ ಮಹಾದೇವ ಶಿವಾಚಾರ್ಯರು, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಭೂರಣಾಪುರದ ಯೋಗೇಶ್ವರಿ ಮಾತಾಜಿ, ಸುರೇಶ ಬಿರಾದಾರ, ಹೊನಮಲ್ಲ ಸಾರವಾರ, ಅಶೋಕಗೌಡ ಪಾಟೀಲ ಹಡಗಲಿ, ಬಸವರಾಜ ಕಳಸಗೊಂಡ, ಮುತ್ತು ಜಂಗಮಶೆಟ್ಟಿ, ಬಿ.ಎಂ.ಬಿರಾದಾರ, ಎಂ.ಎಂ.ಪಾಟೀಲ, ಸುರೇಶ ಶೆಡಶ್ಯಾಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.