ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಯನ್ನು ನಾಲ್ಕು ವರ್ಷವಾದರೂ ಅನಾವರಣಗೊಳಿಸದೇ ಇರುವುದು ಖಂಡನೀಯ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಉದ್ಘಾಟನೆಯ ಗೋಜಿಗೆ ಹೋಗಿಲ್ಲ. ಪುತ್ಥಳಿಗೆ ಹೊದಿಕೆ ಹೊದಿಸಿ ಧೀರ ಮಹಿಳೆಯನ್ನು ಬಂಧನದಲ್ಲಿ ಇರಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ’ ಎಂದು ಹೇಳಿದರು.
ನಾಡಿನ ಶರಣರು, ಸಂತರು, ಮಹಾತ್ಮರು ಒಂದೇ ಸಮುದಾಯಕ್ಕೆ ಸೀಮಿತರಲ್ಲ. ಆದರೆ, ರಾಣಿ ಚನ್ನಮ್ಮಳನ್ನು ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸುವುದು ಸರಿ ಅಲ್ಲ. ಎಲ್ಲ ಸಮುದಾಯಕ್ಕೂ ರಾಣಿ ಚನ್ನಮ್ಮ ಅತ್ಯವಶ್ಯಕ. ನಾಡಿನ ಮಠಾಧೀಶರು ಕೂಡ ಪುತ್ಥಳಿ ಅನಾವರಣದ ಬಗ್ಗೆ ಧ್ವನಿ ಎತ್ತದೇ ಇರುವುದು ದೌರ್ಭಾಗ್ಯ. ಪುತ್ಥಳಿ ಅನಾವರಣಕ್ಕೆ ಜಾತಿ ರಾಜಕಾರಣ ಬೇಡ. ಯಾವುದಕ್ಕೆಲ್ಲ ಮಠಾಧೀಶರು ಹೋರಾಟ ಮಾಡುತ್ತಾರೆ ಆದರೆ, ರಾಣಿ ಚನ್ನಮ್ಮಳ ಪುತ್ಥಳಿ ಅನಾವರಣ ಮಾಡುವುದಕ್ಕೆ ಧ್ವನಿ ಎತ್ತುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಪುತ್ಥಳಿ ನಿರ್ಮಿಸುವುದು ಹಾಗೂ ಉದ್ಘಾಟನೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ಇಲ್ಲಿ ಸರ್ಕಾರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಒದಗಿಸಿಲ್ಲ. ಸಮಾಜ ಬಾಂಧವರು, ಸಂಘ, ಸಂಸ್ಥೆಗಳು ದೇಣಿಗೆ ನೀಡಿ ಪುತ್ಥಳಿ ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದ್ದರಿಂದಲೇ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಂತೆ ಕಾಣುತ್ತಿದೆ. ಜಿಲ್ಲಾಡಳಿತ ಕೂಡ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಸಮಾಜದವರು ಪುತ್ಥಳಿ ನಿರ್ಮಿಸುವ ಜವಾಬ್ದಾರಿ ಸರ್ಕಾರಕ್ಕೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಉದ್ಘಾಟನೆ ಆಗುತ್ತಿತ್ತೋ ಏನೋ ಎಂಬುದು ಜನರ ಮನಸ್ಸಿನಲ್ಲಿ ಮೂಡಿದೆ. ಅದು ಏನೇ ಇರಲಿ ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರದಲ್ಲಿ ರಾಣಿ ಚನ್ನಮ್ಮಳ ಪುತ್ಥಳಿ ಅನಾವರಣ ಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿಯಂದು ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯ. ಆದರೆ, ವಿಜಯಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಆಗಮಿಸುತ್ತಿಲ್ಲ ಎಂದು ಆಪಾದಿಸಿದರು.
ಸಮಾಜದ ಮುಖಂಡರಾದ ಸುರೇಶ ಬಿರಾದಾರ, ಎಂ.ಜಿ. ಯಂಕಂಚಿ, ಸಂಜು ಶೀಳಿನ, ಸಂದೀಪ ಇಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.