ADVERTISEMENT

ದೇವರಹಿಪ್ಪರಗಿ: ರಾವುತರಾಯ, ಮಲ್ಲಯ್ಯ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:33 IST
Last Updated 9 ಅಕ್ಟೋಬರ್ 2025, 4:33 IST
ದೇವರಹಿಪ್ಪರಗಿ ರಾವುತರಾಯ-ಮಲ್ಲಯ್ಯನ ಜಾತ್ರೆಯ ಕೊನೆಯ ದಿನವಾದ ಬುಧವಾರ ರಾವುತರಾಯ ಬಂಡಿ ಉತ್ಸವದೊಂದಿಗೆ ಪುರ ಪ್ರವೇಶಿಸಿದನು.
ದೇವರಹಿಪ್ಪರಗಿ ರಾವುತರಾಯ-ಮಲ್ಲಯ್ಯನ ಜಾತ್ರೆಯ ಕೊನೆಯ ದಿನವಾದ ಬುಧವಾರ ರಾವುತರಾಯ ಬಂಡಿ ಉತ್ಸವದೊಂದಿಗೆ ಪುರ ಪ್ರವೇಶಿಸಿದನು.   

ದೇವರಹಿಪ್ಪರಗಿ: ಸತತ ನಾಲ್ಕು ದಿನಗಳಿಂದ ನಡೆದ ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆ ಸಂಪನ್ನಗೊಂಡಿತು. ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರು ದರ್ಶನ ಪಡೆದರು.

ಪಟ್ಟಣದ ಹೊರವಲಯದ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಶನಿವಾರದಂದು ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮಧ್ಯೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ನಾಡಿನ ಹಾಗು ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಿಗ್ಗೆ 7.00 ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನಿಗೆ ಭಕ್ತಾಧಿಗಳು 'ಏಳುಕೋಟಿ ಏಳುಕೋಟಿ ಏಳುಕೋಟಿ ಗೇ' ಎಂಬ ಜಯಕಾರದೊಂದಿಗೆ ಭಕ್ತಿ ಸಮರ್ಪಿಸಿದರು.

ಜಾತ್ರೆಯಲ್ಲಿ ವಿಶೇಷವಾಗಿ ದಿವಟಿಗೆ ಹಿಡಿದವರು ಸಾಲಾಗಿ ಕುಳಿತು ಭಕ್ತಿಯ ಭಾವ ಮೆರೆದರೆ, ಪುರುಷ ವಗ್ಗೆಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣದ ಜನರು ನಾಲ್ಕು ದಿನಗಳವರೆಗೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಪ್ರತಿದಿನ ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರಗು ತಂದರು. ಜಾತ್ರೆಯ ಅಂಗವಾಗಿ ಭಾರ ಎತ್ತುವ ಸ್ಪರ್ಧೆಗಳು, ಅನ್ನಪ್ರಸಾದ ಪ್ರತಿವರ್ಷದಂತೆ ಕಂಡು ಬಂದವು.

ADVERTISEMENT

ಪಾರಂಪರಿಕ ಪವಿತ್ರತೆಯ ಸಂಕೇತವಾಗಿ ಕೇವಲ ಹಣೆಗೆ ಹಚ್ಚುತ್ತಿದ್ದ ಭಂಡಾರ ವರ್ಷದಿಂದ ವರ್ಷಕ್ಕೆ ಎರಚುವ ಬಣ್ಣವಾಗಿ ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿರುವುದು ಜಾತ್ರೆಯಿಂದ ಸಭ್ಯರು ದೂರವೇ ಉಳಿಯುವಂತಾಗಿದ್ದು, ಜೊತೆಗೆ ಇಡೀ ಪಟ್ಟಣದ ರಸ್ತೆಯೆಲ್ಲಾ ಹಳದಿಮಯವಾಗಿ ಭಂಡಾರದ ಮಹತ್ವವೇ ಕಳೆಯುವಂತಾಗಿದೆ ಎಂದು ಬಹುತೇಕ ಭಕ್ತರು ಬೇಸರ ವ್ಯಕ್ತಪಡಿಸುವುದು ಕಂಡು ಬಂತು. ಇನ್ನೂ ಜಾತ್ರೆಯುದ್ದಕ್ಕೂ ಜಾತ್ರಾ ಕಮೀಟಿ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ ವಹಿಸಿದ್ದರಿಂದ ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯಿಂದ ಮುಕ್ತಾಯಗೊಂಡು ಜನಸಮೂಹದ ಪ್ರಶಂಸೆಗೆ ಪಾತ್ರವಾಯಿತು.

ಭವಿಷ್ಯದ ಕುರಿತಾದ ಕಾರಣಿಕ ನುಡಿಗಳು: ರಾವುತರಾಯ ಪ್ರತಿವರ್ಷ ಮಲ್ಲಯ್ಯ ದೇವಸ್ಥಾನಕ್ಕೆ ತೆರಳುವಾಗ ಹಾಗೂ ಬರುವಾಗ ಕಾರಣಿಕರು ಭವಿಷ್ಯದ ಕುರಿತು ಹೇಳಿಕೆಗಳನ್ನು ಹೇಳುವ ವಾಡಿಕೆಯಿದ್ದು, ಈ ಬಾರಿ ಅವರು ಹೇಳಿದಂತೆ, ಚಿತ್ತಿ,ಸ್ವಾತಿ, ಈಸಾಕಿ ಮಳೆ ಒಂದು ಸಲ ಕೊಡತೀನಿ. ಬಿಳಿ ಕಾಳ ಕಟ್ಟಿ ಒಕ್ಕಳ ಆಯಿತು. ಗೋಧಿ, ಅಗಸಿ, ಕುಸುಬಿ, ಕಡಲೆ ಜೋಳದ ಬೆನ್ನು ಹತ್ತಿದವು. ಕಾಲಮಾನ ಬಹಳ ಕಷ್ಟಬಂತು. ಜನರಿಗೆ ಎಷ್ಟು ಹೇಳಿದರೂ ತಿಳಿಯುತ್ತಿಲ್ಲ. ಕರ್ಮ, ಧರ್ಮಗಳಲ್ಲಿ ಧರ್ಮ ಕಡಿಮೆಯಾಗಿ ಕರ್ಮದ ತೂಕವೇ ಹೆಚ್ಚಾಗುತ್ತಿದೆ. ಚಟ್ಟಿ ಜಾತ್ರೆಗೆ ನನ್ನ ಕುದರಿ ತಗೊಂಡು ಕುಣಕೋತ ಬರತೀನಿ, ನನ್ನ ಕುದರಿಗಿ ಯಾರು ಕೈ ಹಚ್ಚಬ್ಯಾಡ್ರಿ. ನನ್ನ ಸಿಂಹಾಸನ ಎಲ್ಲರೂ ಮುಟ್ಟಬ್ಯಾಡ್ರಿ ಬಾಳ ಜೋಕಿ. ಎಂಬ ಭವಿಷ್ಯದ ಕುರಿತು ಹೇಳಲ್ಪಟ್ಟವು.

ದೇವರಹಿಪ್ಪರಗಿ ರಾವುತರಾಯ ಮಲ್ಲಯ್ಯ ಜಾತ್ರೆಯ ಅಂಗವಾಗಿ ಸೇರಿದ ಜನಸ್ತೋಮ.
ದೇವರಹಿಪ್ಪರಗಿ ರಾವುತರಾಯ ಮಲ್ಲಯ್ಯ ಜಾತ್ರೆಯ ಅಂಗವಾಗಿ ಭಾರ ಎತ್ತುವ ಸ್ಪರ್ಧೆಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.