ADVERTISEMENT

ಆಲಮಟ್ಟಿ: 4.20 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ, ಜಾಕ್‌ವೆಲ್ ಜಲಾವೃತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 14:36 IST
Last Updated 30 ಜುಲೈ 2021, 14:36 IST
ಯಲಗೂರ ಬಳಿ ಇರುವ ನಿಡಗುಂದಿಗೆ ಪೂರೈಕೆಯಾಗುವ ಜಾಕ್‌ ವೆಲ್ ಸುತ್ತಮುತ್ತಲೂ ಸಂಪೂರ್ಣ ಜಲಾವೃತಗೊಂಡಿರುವುದು
ಯಲಗೂರ ಬಳಿ ಇರುವ ನಿಡಗುಂದಿಗೆ ಪೂರೈಕೆಯಾಗುವ ಜಾಕ್‌ ವೆಲ್ ಸುತ್ತಮುತ್ತಲೂ ಸಂಪೂರ್ಣ ಜಲಾವೃತಗೊಂಡಿರುವುದು   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, 4.20 ಲಕ್ಷ ಕ್ಯುಸೆಕ್ ನೀರನ್ನು 26 ಗೇಟ್‌ಗಳ ಮೂಲಕ ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದ್ದು, ಶುಕ್ರವಾರವೂ ಮುಂದುವರೆದಿದೆ. ಇದರಿಂದ ಮತ್ತಷ್ಟು ಪ್ರವಾಹದ ಆತಂಕ ಕೃಷ್ಣಾ ತೀರದಲ್ಲಿ ಮನೆ ಮಾಡಿದೆ.

ಜಲಾಶಯದ ಒಳಹರಿವು ಕೂಡಾ 4.20 ಲಕ್ಷ ಕ್ಯುಸೆಕ್ ಇದ್ದು, ಗಂಟೆ ಗಂಟೆಗೂ ಹೆಚ್ಚು ಕಡಿಮೆಯಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಸದ್ಯ 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.17 ಮೀ.ವರೆಗೆ ನೀರಿದ್ದು, 86.59 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ADVERTISEMENT

ಈ ವರ್ಷದಲ್ಲಿ ಇದು ಗರಿಷ್ಠ ಹೊರಹರಿವು. 2019ರಲ್ಲಿ 5.70 ಲಕ್ಷ ಕ್ಯುಸೆಕ್ ಬಿಟ್ಟಿದ್ದು, ಇಲ್ಲಿಯವರೆಗಿನ ಗರಿಷ್ಠ ಹೊರಹರಿವು ಆಗಿದೆ.

ಇನ್ನಷ್ಟು ಜಮೀನು ಜಲಾವೃತ: ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮದ ಇನ್ನು ಹೆಚ್ಚುವರಿಯಾಗಿ 50 ಎಕರೆಗೂ ಹೆಚ್ಚಿನ ಜಮೀನುಗಳಿಗೆ ನೀರು ಆವರಿಸಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ತಿಳಿಸಿದರು.

ಜಾಕ್‌ವೆಲ್ ಸಂಪೂರ್ಣ ಜಲಾವೃತ: ಆಲಮಟ್ಟಿ ಜಲಾಶಯದ ಮುಂಭಾಗದ ಯಲಗೂರ ಬಳಿ ಇರುವ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯ ಜಾಕ್‌ವೆಲ್ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತೆಯ ಕ್ರಮವಾಗಿ ಅಲ್ಲಿದ್ದ ಪಂಪ್‌ಸೆಟ್ ಅನ್ನು ಶುಕ್ರವಾರ ಸ್ಥಳಾಂತರಿಸಲಾಗಿದೆ. ಇದರಿಂದ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಳೆ ಪ್ರಮಾಣ: ಕೃಷ್ಣಾ ಕಣಿವೆಯ ಮಹಾರಾಷ್ಟ್ರದಲ್ಲಿ ಕೊಯ್ನಾ 4 ಸೆಂ.ಮೀ, ನವಜಾ 3.8 ಸೆಂ.ಮೀ, ಮಹಾಬಳೇಶ್ವರ 7.7 ಸೆಂ.ಮೀ ಮಳೆಯಾಗಿದೆ. ಕೊಯ್ನಾ ನದಿಯಿಂದ 50,185 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.

ರಾಜಾಪುರ ಬ್ಯಾರೇಜ್ ನಿಂದ 2,62,000 ಕ್ಯುಸೆಕ್ ಹಾಗೂ ದೂದ್‌ಗಂಗಾ ನದಿಯಿಂದ 42,240 ಕ್ಯುಸೆಕ್ ಸೇರಿ 3,04,240 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಕಲ್ಲೋಳ ಬ್ಯಾರೇಜ್ ಬಳಿ ಬಂದು ಸೇರುತ್ತಿದೆ. ಇದರಿಂದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರವಾಹದ ಆತಂಕ ಸ್ವಲ್ಪ ಪ್ರಮಾಣ ಕಡಿಮೆಯಾಗಿದೆ.

ಹಿಪ್ಪರಗಿ ಬ್ಯಾರೇಜ್‌ಗೆ ಕೃಷ್ಣಾ ನದಿಯ ಹರಿವು ಕೂಡಾ ಶುಕ್ರವಾರ ಸಂಜೆ 3,88,461 ಕ್ಯುಸೆಕ್ ಇದೆ. ಸದ್ಯ ಅಲ್ಲಿಯ ಕೃಷ್ಣೆಯ ಹರಿವು ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.