ADVERTISEMENT

ಜನಮನದಲ್ಲಿ ಸದಾ ಸ್ಮರಣೀಯ ಎಂ.ಸಿ.ಮನಗೂಳಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:27 IST
Last Updated 28 ಜನವರಿ 2026, 7:27 IST
ಎಂ.ಸಿ.ಮನಗೂಳಿ
ಎಂ.ಸಿ.ಮನಗೂಳಿ   

ಸಿಂದಗಿ: ಸರಳ ಸಜ್ಜನಿಕೆಯ ರಾಜಕಾರಣಿ, ಶಿಕ್ಷಣ ಪ್ರೇಮಿ, ಮಾಜಿ ಸಚಿವ ಎಂ.ಸಿ.ಮನಗೂಳಿ ಅಗಲಿ ಇಂದಿಗೆ (ಜ.28) ಐದು ವರ್ಷ ಗತಿಸಿದರೂ ಅವರು ಮಾಡಿದ ಸೇವೆ, ಅಭಿವೃದ್ಧಿಪರ ಕಾರ್ಯಗಳಿಂದಾಗಿ ಜನಮನದಲ್ಲಿ ಸದಾ ಹಚ್ಚ ಹಸಿರಾಗಿ ಉಳಿದಿದ್ದಾರೆ.

ಆದರ್ಶವಾಗಿ ಬಾಳಿ ಬದುಕಿ ತಮ್ಮ ಸಾಮರ್ಥ್ಯ ಮತ್ತು ಪ್ರಯತ್ನದಿಂದ ಶೂನ್ಯದಿಂದ ಶಿಖರಕ್ಕೇರಿದ ಮನಗೂಳಿ ಅವರ ಜೀವನ ನಮಗೆಲ್ಲ ಸ್ಫೂರ್ತಿ.

ಗ್ರಾಮ ಸೇವಕರಾಗಿದ್ದ ಮನಗೂಳಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾದದ್ದು ಸಾಮಾನ್ಯ ಸಾಧನೆಯಲ್ಲ. ಅವರ ಸಾಧನೆಯ ಹಿಂದಿನ ಶಕ್ತಿ ಅವರ ಪತ್ನಿ ಸಿದ್ದಮ್ಮಗೌಡತಿ.

ADVERTISEMENT

ದಿವಂಗತ ಬಿ.ಕೆ.ಗುಡದಿನ್ನಿಯವರ ರಾಜಕೀಯ ಶಿಷ್ಯರಾಗಿದ್ದರು. 1976 ರಲ್ಲಿ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರಾದರು. ನಂತರ ಅದೇ ಸಂಸ್ಥೆಯ ಅಧ್ಯಕ್ಷರಾಗಿ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು.

1989ರಲ್ಲಿ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು. 1994ರಲ್ಲಿ ಅದೇ ಪಕ್ಷದಿಂದ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕರಾದರು. ಜೊತೆಗೆ ಸಚಿವರಾಗಿಯೂ ಕೆಲಸ ಮಾಡಿದರು.

‘ರೈತರಿಗಾಗಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ತನಕ ಪಾದರಕ್ಷೆ ಧರಿಸುವದಿಲ್ಲ’ ಎಂದು ಬರದ ನಾಡಿಗೆ ನೀರು ಹರಿಸಿ ಆಧುನಿಕ ಭಗೀರಥ ಎಂದು ಹೆಸರುವಾಸಿಯಾದರು.

2018ರಲ್ಲಿ ಮತ್ತೆ ಜೆಡಿಎಸ್ ಪಕ್ಷದಿಂದ ಶಾಸಕರಾದರು. ಎರಡನೆಯ ಬಾರಿಗೆ ಮತ್ತೆ ಸಚಿವರಾದರು. ಆಲಮೇಲ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿಸಿ ಅಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡಿಸಿದರು. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದರು.

ಸಿಂದಗಿ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ, ಮಿನಿವಿಧಾನಸೌಧ ಕಟ್ಟಡಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದರು. ಪಟ್ಟಣದ ಪ್ರತಿಯೊಂದು ವಾರ್ಡಿಗೆ ₹1 ಕೋಟಿ ಬಿಡುಗಡೆಗೊಳಿಸಿ ಪಟ್ಟಣವನ್ನು ಅಭಿವೃದ್ಧಿಪಡಿಸಿದರು. ಕಡಣಿ ಬ್ಯಾರೇಜು ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಂಡರು. ಪಂಚಾಚಾರ್ಯ ಪೀಠದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದರು.

ಜನಸೇವಕನಾಗಿ, ಶಾಸಕರಾಗಿ, ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ಅವರ ಐದನೇ ಪುಣ್ಯಸ್ಮರಣೆ ಆಚರಿಸುತ್ತಿದ್ದೇವೆ. ಭೌತಿಕವಾಗಿ ನಮ್ಮೊಂದಿಗಿಲ್ಲ ಆದರೆ, ಅವರ ಜನಪರ ಕಾರ್ಯಗಳು ಜೀವಂತವಾಗಿವೆ.

ಪ್ರೊ.ಎ.ಆರ್.ಹೆಗ್ಗನದೊಡ್ಡಿ, ಪ್ರಾಚಾರ್ಯ, ಎಚ್.ಜಿ.ಪಿಯು ಕಾಲೇಜು ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.