ADVERTISEMENT

ರಸ್ತೆ ಅಪಘಾತ, ಸಾವಿನ ಪ್ರಮಾಣ ಹೆಚ್ಚಳ: ಆತಂಕ

ಜಿಲ್ಲೆಯಲ್ಲಿ ಅಪಘಾತ, ಸಾವು ಪ್ರಕರಣ ತಡೆಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 14:00 IST
Last Updated 24 ಸೆಪ್ಟೆಂಬರ್ 2021, 14:00 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಆನಂದ ಕುಮಾರ್ ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಇದ್ದಾರೆ
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಆನಂದ ಕುಮಾರ್ ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಇದ್ದಾರೆ   

ವಿಜಯಪುರ:ಜಿಲ್ಲೆಯಲ್ಲಿ 2020ಕ್ಕೆ ಹೋಲಿಕೆ ಮಾಡಿದರೆ 2021 ‌ರಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಪಘಾತಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಅಪಘಾತ ಸ್ಥಳಗಳಿಗೆ ಪೊಲೀಸ್, ಸಾರಿಗೆ, ಲೋಕೊಪಯೋಗಿ ಇಲಾಖೆ ಒಳಗೊಂಡ ಪರಿಶೀಲನಾ ತಂಡ ಭೇಟಿ ನೀಡಿ ಅಪಘಾತಕ್ಕೆ ನಿಖರ ಕಾರಣ ತಿಳಿಯಬೇಕು ಎಂದರು.

ಪದೇ ಪದೇ ಅಪಘಾತ ಸಂಭವಿಸಲು ಪ್ರಮುಖ ಕಾರಣಗಳನ್ನು ಪತ್ತೆ ಮಾಡಬೇಕು ಹಾಗೂ ಅಪಘಾತಗಳನ್ನು ತಡೆಗಟ್ಟಲು ಕಾರ್ಯಯೋಜನೆಯ ಹಮ್ಮಿಕೊಳ್ಳುವ ಕುರಿತು ಪ್ರಾಧಿಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಜಿಲ್ಲೆಯಲ್ಲಿ ಹೆಚ್ಚು ಅಪಘಾತ ಸಂಭವಿಸುವ 14 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಈ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಎಷ್ಟು ಸ್ಥಳಗಳನ್ನು ಸರಿಪಡಿಸಲಾಗಿದೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದರು.

ಹೊರ್ತಿ ಹತ್ತಿರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಲ್ಯಾಕ್‌ ಸ್ಪಾಟ್‌ ಗುರುತಿಸಲಾಗಿತ್ತು. ಈ ಸ್ಥಳವನ್ನು ಪರಿಶೀಲಿಸಿ ವರದಿ ನೀಡುವಂತೆ ಪೊಲೀಸ್ ಇಲಾಖೆ ಸೂಚಿಸಲಾಗಿತ್ತು. ಈ ಕಾಮಗಾರಿ ಪೂರ್ಣಗೊಂಡ ಬಗ್ಗೆ ಹಾಗೂ ಬ್ಲ್ಯಾಕ್‌ ಸ್ಪಾಟ್‌ ಸರಿಪಡಿಸಿದ ಬಗ್ಗೆ ಹಾಗೂ ಸಿಂದಗಿ ಬೈಪಾಸ್ ರಸ್ತೆ, ಬೊಮ್ಮನಜೋಗಿ ಕ್ರಾಸ್, ಚಿಕ್ಕ ಸಿಂದಗಿ ಕ್ರಾಸ್, ದೇವರ ಹಿಪ್ಪರಗಿ ಹತ್ತಿರ ಬ್ಲ್ಯಾಕ್‌ ಸ್ಪಾಟ್‌ ಸರಿಪಡಿಸಲಾಗಿದೆಯೇ ಎಂಬುದನ್ನು ಪರಿಶೀಲೀಸಿ ಪಟ್ಟಿಯಿಂದ ಕೈಬಿಡಲು ತಿಳಿಸಿದರು.

ಸೈನಿಕ್ ಸ್ಕೂಲ್ ಮುಖ್ಯ ಪ್ರವೇಶ ದ್ವಾರದ ಹತ್ತಿರ, ಮಲಘಾಣ ಕ್ರಾಸ್, ಮುಳವಾಡ ಕ್ರಾಸ್, ಕೂಡಗಿ ಕ್ರಾಸ್, ಶರ್ಮಾ ದಾಬಾ ಹತ್ತಿರ, ಹಿಟ್ನಳ್ಳಿ ಗ್ರಾಮದ ಹತ್ತಿರ, ಜುಮನಾಳ ಕ್ರಾಸ್ ಹತ್ತಿರ, ತೋರವಿ ಲಕ್ಷ್ಮೀ ದೇವಸ್ಥಾನದ ಹತ್ತಿರ ಬ್ಲ್ಯಾಕ್‌ ಸ್ಪಾಟ್‌ ಸರಿಪಡಿಸಲಾಗಿರುವುದರಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದರು.

ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಸೂಚಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಮೇಲೆ ಒಳಚರಂಡಿ ಮ್ಯಾನ್ ಹೋಲ್‍ಗಳನ್ನು ದುರಸ್ಥಿ ಮಾಡಿ ಎಲ್ಲ ಮ್ಯಾನಹೋಲ್‍ಗಳ ಮುಚ್ಚಳವನ್ನು ಮುಚ್ಚಲು, ಬ್ಲಾಕ್ ಸ್ಪಾಟ್‍ಗಳನ್ನು ರಿಪೇರಿ ಮಾಡಿ ತಗ್ಗುಗುಂಡಿಗಳನ್ನು ಮುಚ್ಚುವಂತೆ ಹಾಗೂ ಬೀದಿ ದೀಪಗಳನ್ನು ದುರಸ್ಥಿಗೊಳಿಸುವಂತೆ ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಆನಂದ ಕುಮಾರ್, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಗುಣಮಟ್ಟದ ರೀತಿಯಲ್ಲಿ ಕೈಗೊಳ್ಳುವುದರ ಜೊತೆಗೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ಅಪಘಾತ ಸಂಭವಿಸುವ ಪ್ರದೇಶಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ ಮೊಬೈಲ್ ನಂಬರ್‍ಗಳನ್ನು ಒಳಗೊಂಡ ಬೋರ್ಡ್‍ಗಳ ಹಾಗೂ ಬ್ಯಾನರ್‍ಗಳನ್ನು ಅಳವಡಿಸಬೇಕು ಎಂದು ಅವರು ಸೂಚಿಸಿದರು.

ಈ ವರ್ಷ 92 ಚಾಲನಾ ಪರವಾನಗಿ ಪತ್ರಗಳನ್ನು ಅಮಾನತು ಪಡಿಸಲಾಗಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸಕ್ತ ವರ್ಷದಲ್ಲಿ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ ದಂಡವನ್ನು ಹೆಚ್ಚು ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ನಿದಿಪಡಿಸಿದ ಗುರಿಯನುಸಾರ ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ರಾಜಸ್ವ ವಸೂಲಿಗೆ ಕ್ರಮಕೈಗೊಳ್ಳಬೇಕು

– ಪಿ.ಸುನೀಲ್‌ ಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.