ADVERTISEMENT

ಆರ್‌ಟಿಇ: ಪ್ರವೇಶ ಸಂಖ್ಯೆ ಕುಸಿತ

150 ಶಾಲೆ; 1,063 ಸೀಟು ಲಭ್ಯ; 269 ವಿದ್ಯಾರ್ಥಿಗಳು ದಾಖಲು

ಬಾಬುಗೌಡ ರೋಡಗಿ
Published 25 ಜೂನ್ 2019, 19:31 IST
Last Updated 25 ಜೂನ್ 2019, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಯೋಜನೆ ಅಡಿ ಜಿಲ್ಲೆಯಲ್ಲಿ 1,063 ಸೀಟುಗಳು ಲಭ್ಯವಿದ್ದರೂ, ಈ ಪೈಕಿ ಎಲ್‌ಕೆಜಿ 44 ಹಾಗೂ ಒಂದನೇ ತರಗತಿಗೆ 225 ಸೇರಿ 269 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದುಕೊಂಡಿದ್ದಾರೆ.

ಆರ್‌ಟಿಇ ಯೋಜನೆ ಆರಂಭಗೊಂಡ ನಂತರ ಪ್ರತಿ ವರ್ಷ ಬೇಡಿಕೆ ಪ್ರಮಾಣ ಹೆಚ್ಚಳವಾಗುತ್ತಿತ್ತು. ಪ್ರವೇಶ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿರುವುದು ಹಾಗೂ ಸರ್ಕಾರಿ ಶಾಲೆಗಳಲ್ಲಿಯೇ ಇಂಗ್ಲಿಷ್‌ ಮಾಧ್ಯಮ ಎಲ್‌ಕೆಜಿ, ಒಂದನೇ ತರಗತಿಯನ್ನು ಆರಂಭಿಸಿರುವುದರಿಂದ ಈ ವರ್ಷ ಲಭ್ಯ ಸೀಟುಗಳಿಗಿಂತ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ 150 ಶಾಲೆಗಳಿಗೆ 1,063 ಸೀಟುಗಳು ಮಂಜೂರಾಗಿದ್ದವು. ಈ ಪೈಕಿ 38 ಶಾಲೆಗಳಲ್ಲಿ 269 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದುಕೊಂಡಿದ್ದಾರೆ. ಬಸವನಬಾಗೇವಾಡಿ ತಾಲ್ಲೂಕಿನ 18 ಶಾಲೆಗಳಿಗೆ 139 ಸೀಟು ಮಂಜೂರಾಗಿವೆ. ಆದರೆ, ಈ ಪೈಕಿ 7 ಶಾಲೆಗಳಲ್ಲಿ 47 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದುಕೊಂಡಿದ್ದಾರೆ. ಅದೇ ರೀತಿ ಚಡಚಣ ತಾಲ್ಲೂಕಿನ 11 ಶಾಲೆಗಳಿಗೆ 106 ಸೀಟು ಮಂಜೂರಾಗಿದ್ದು, 3 ಶಾಲೆಗಳಲ್ಲಿ 19 ವಿದ್ಯಾರ್ಥಿಗಳು, ಇಂಡಿ ತಾಲ್ಲೂಕಿನ 11 ಶಾಲೆಗಳಿಗೆ 76 ಸೀಟು ಮಂಜೂರಾಗಿದ್ದು,1 ಶಾಲೆಗೆ 7 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ADVERTISEMENT

ಮುದ್ದೇಬಿಹಾಳ ತಾಲ್ಲೂಕಿನ 20 ಶಾಲೆಗಳಿಗೆ 123 ಸೀಟುಗಳು ಮಂಜೂರಾಗಿದ್ದು, 2 ಶಾಲೆಗಳಲ್ಲಿ 6 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರೆ, ಸಿಂದಗಿ ತಾಲ್ಲೂಕಿನ 19 ಶಾಲೆಗಳಿಗೆ 131 ಸೀಟುಗಳು ಮಂಜೂರಾಗಿದ್ದು, 9 ಶಾಲೆಗಳಲ್ಲಿ 59 ವಿದ್ಯಾರ್ಥಿಗಳು, ವಿಜಯಪುರ ಗ್ರಾಮೀಣದ 32 ಶಾಲೆಗಳಿಗೆ 146 ಸೀಟುಗಳು ಮಂಜೂರಾಗಿದ್ದು, 2 ಶಾಲೆಗಳಲ್ಲಿ 7 ವಿದ್ಯಾರ್ಥಿಗಳು, ವಿಜಯಪುರ ನಗರದ 38 ಶಾಲೆಗಳಿಗೆ 354 ಸೀಟುಗಳು ಮಂಜೂರಾಗಿದ್ದು, 14 ಶಾಲೆಗಳಲ್ಲಿ 124 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

‘ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಆರ್‌ಟಿಇ ಯೋಜನೆ ಆರಂಭಿಸಿದೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಇರದಿದ್ದರೆ, ಆರ್‌ಟಿಇ ಅಡಿ ಪ್ರವೇಶ ಪಡೆಯುವ ನಿಯಮ ರೂಪಿಸಲಾಗಿತ್ತು. ಆರ್ಥಿಕವಾಗಿ ಸಬಲರಾಗಿರುವವರೇ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಶಾಲೆ ವ್ಯಾಪ್ತಿಯಲ್ಲಿ ರಹವಾಸಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ದುರ್ಬಳಕೆ ಮಾಡುವುದು ಹೆಚ್ಚಿತ್ತು. ಇದೀಗ ಕೆಲ ನಿಯಮಗಳ ಬದಲಾವಣೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ದಾಖಲಾತಿ ಇಳಿಕೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌ಟಿಇ; ₹11 ಕೋಟಿ ಬಾಕಿ
2018–19ನೇ ಸಾಲಿನಲ್ಲಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಯೋಜನೆ ಅಡಿ ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ 4,604 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಅವರ ಶಿಕ್ಷಣ ನಿರ್ವಹಣೆಗಾಗಿ ಸರ್ಕಾರ ನೀಡಬೇಕಿದ್ದ ₹19.30 ಕೋಟಿ ಅನುದಾನದ ಪೈಕಿ ಈಗಾಗಲೇ ₹8.30 ಕೋಟಿ ಬಿಡುಗಡೆಗೊಳಿಸಿದ್ದು, ಇನ್ನೂ ₹11 ಕೋಟಿ ಬಾಕಿ ಉಳಿಸಿಕೊಂಡಿದೆ.

*
ಆರ್‌ಟಿಇ ಯೋಜನೆ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಿಯಮಗಳನ್ನು ಬದಲಾವಣೆ ಮಾಡಿದ್ದರಿಂದ ಜಿಲ್ಲೆಯಲ್ಲಿ ದಾಖಲಾತಿ ಪ್ರಮಾಣ ಇಳಿಕೆಯಾಗಿದೆ.
-ಸಿ.ಪ್ರಸನ್ನಕುಮಾರ್, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.