ಇಂಡಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಬಹಳಷ್ಟು ರಸ್ತೆಗಳು ಹಾಳಾಗಿದ್ದು, ವಾಹನ ಸವಾರರಿಗೆ ಅತೀವ ತೊಂದರೆಯಾಗುತ್ತಿದೆ. ರಸ್ತೆಯ ಬಗ್ಗೆ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನ ಭತಗುಣಕಿ ಗ್ರಾಮದಿಂದ ಮೈಲಾರ ಗ್ರಾಮಕ್ಕೆ ಹೋಗುವ ರಸ್ತೆ, ತಡವಲಗಾ ಗ್ರಾಮದಿಂದ ನಿಂಬಾಳ-ಕ್ಯಾತನಕೇರಿ ಗ್ರಾಮಗಳಿಗೆ ಹೋಗುವ ರಸ್ತೆ, ಭುಯ್ಯಾರದಿಂದ ಖೇಡಗಿಗೆ ಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಮಳೆಯಾದರೆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ರಸ್ತೆಯಲ್ಲಿನ ಗುಂಡಿಗಳೇ ಕಾಣುವುದಿಲ್ಲ. ಹೀಗಾಗಿ ದ್ವಿಚಕ್ರ ವಾಹನಗಳು ಗುಂಡಿಯಲ್ಲಿ ಹಾದು ಜಾರಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ಸೇರುತ್ತಿದ್ದಾರೆ.
ಈ ರಸ್ತೆಗಳು ಬಹಳ ವರ್ಷಗಳಿಂದ ಹದಗೆಟ್ಟಿದ್ದರೂ ಸಹಿತ ಯಾವೊಬ್ಬ ಅಧಿಕಾರಿಗಳು ಈ ರಸ್ತೆ ದುರಸ್ಥಿ ಕಾರ್ಯ ಮಾಡಲು ಮುಂದಾಗಿಲ್ಲ. ಇದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮೇಲಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರಸ್ತೆಗಳ ರಿಪೇರಿಗೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಮೈಲಾರದಿಂದ ಭತಗುಣಕಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದುವರೆಗೂ ಅದನ್ನು ದುರಸ್ತಿ ಮಾಡಲು ಅಥವಾ ಹೊಸ ರಸ್ತೆ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಮುಂದಾಗಿಲ್ಲ
- ಸಿದ್ದಾರಾಮ ಮಾಳಗೆ ಮೈಲಾರ ಗ್ರಾಮ
ನಿಂಬಾಳ-ಕ್ಯಾತನಕೇರಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿ ಸಹ ಮಾಡಿಸಿಲ್ಲ. 10 ನಿಮಿಷ ಸಾಗಬೇಕಾದ ರಸ್ತೆಯಲ್ಲಿ ಅರ್ಧ ಗಂಟೆ ಸಾಗಬೇಕಿದೆ. ಇದರಿಂದ ವಾಹನಗಳ ಸ್ಥಿತಿ ಹಾಳಾಗುತ್ತಿದೆ
-ಸುನೀಲ ರಾಠೋಡ ನಿಂಬಾಳ ಗ್ರಾಮ
ಸರ್ಕಾರದಿಂದ ಇನ್ನು 15 ದಿನದಲ್ಲಿ ಅನುದಾನ ಬರುವ ನಿರೀಕ್ಷೆ ಇದೆ. ಅನುದಾನ ಬಂದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಕೆಟ್ಟಿರುವ ರಸ್ತೆಗಳ ರಿಪೇರಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ
-ದಯಾನಂದ ಮಠ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.