ಆಲಮೇಲ: ಶರಣರು, ಸಂತರು, ಮಹಾಂತರು, ಸೂಫಿಗಳು, ಮಹಾತ್ಮರ ಲೀಲೆಗಳು ಈ ನಾಡಿನಲ್ಲಿ ಅಗಣಿತ. ಇಂಥಹವರ ಸಾಲಿನಲ್ಲಿ ದೇವಣಗಾಂವ ಸರತಿಮಠದ ಲಿಂ.ಸಂಗಯ್ಯ ಮುತ್ಯಾ ಒಬ್ಬರು.
ಕ್ಷೇತ್ರಾಧಿಪತಿ ಶಿವಲಿಂಗೇಶ್ವರ, ಗುಡ್ಡಾಪುರದ ದಾನಮ್ಮ ದೇವಿ ಕೃಪೆಯ ಪುತ್ರರಾಗಿ ಲಿಂಗಯ್ಯ–ಬಸಮ್ಮನವರ ಉದರದಲ್ಲಿ ಜನಿಸಿ, 81 ವರ್ಷ ಬಡವರು, ನಿರ್ಗತಿಕರು, ಶೋಷಿತರನ್ನು ಮೇಲೆತ್ತುವ ಕಾಯಕದಲ್ಲಿ ತಲ್ಲೀನರಾದವರು ಸಂಗಯ್ಯ.
ತಮ್ಮ ಬದುಕಿನುದ್ದಕ್ಕೂ ಜನರಲ್ಲಿ ಭಕ್ತಿಯ ಬೀಜ ಬಿತ್ತಿ, ಜಾತಿ, ಧರ್ಮ, ಪಂಥ, ಮತ, ಭೇದವಿಲ್ಲದೇ ಬಡವರಿಗೆ ಭಾಗ್ಯವನ್ನು, ಬಂಜೆಯರಿಗೆ ಸಂತಾನ ಕರುಣಿಸಿದ ಕರುಣಾ ಮೂರ್ತಿ. ಭೂತ ಪ್ರೇತಗಳ ಬಾಧೆಯಿಂದ ತೊಂದರೆಗೊಳಗಾದವರನ್ನು ತಮ್ಮ ತಪೋಶಕ್ತಿಯಿಂದ ಮುಕ್ತಗೊಳಿಸಿ, ಬದುಕನ್ನು ಹಸನುಗೊಳಿಸಿದ ಕರುಣಾಮಯಿ ಎಂಬ ಪ್ರತೀತಿ ಇಂದಿಗೂ ಈ ಭಾಗದಲ್ಲಿದೆ.
ಬಡ ಮಕ್ಕಳಿಗೆ ಅನ್ನ–ವಸ್ತ್ರ ನೀಡಿ ಶಿಕ್ಷಣದ ಜಾಗೃತಿ ಮೂಡಿಸಿದರು. ಹಲ ದಶಕದಿಂದ ಜೀರ್ಣೋದ್ಧಾರವಿಲ್ಲದೆ ನಿಂತಿದ್ದ ಶಿವಲಿಂಗೇಶ್ವರ ದೇಗುಲವನ್ನು ಪುನರ್ ನಿರ್ಮಿಸಿದ ಕೀರ್ತಿ ಇವರದ್ದೇ. 1992ರಲ್ಲಿ ಲಿಂಗ್ಯೆಕ್ಯರಾದರು.
ಸ್ಮರಣೋತ್ಸವ: ಮೇ 2ರಂದು ಪುಣ್ಯ ಸ್ಮರಣೋತ್ಸವದ ಅಂಗವಾಗಿ, ಗುರುವಾರ ಬೆಳಿಗ್ಗೆ 6ಕ್ಕೆ ಶಿವಲಿಂಗ ದೇವರಿಗೆ, ಸಂಗಯ್ಯ ಮುತ್ಯಾ ಗದ್ದುಗೆಗೆ ಭೀಮಾ ನದಿಯ ಉದಕದಿಂದ ಕುಂಭಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಂಗಳಾರತಿ, 7ಕ್ಕೆ ಹಿರೇಜೇವರ್ಗಿಯ ಜಯಗುರುಶಾಂತಲಿಂಗ ಶ್ರೀಗಳಿಂದ ಪಂಚಾಚಾರ್ಯ ದ್ವಜಾರೋಹಣ ನೆರವೇರುವುದು. ನಂತರ ಪ್ರಸಾದ ವಿತರಣೆ ನಡೆಯಲಿದೆ. 10ಕ್ಕೆ ಧರ್ಮಸಭೆ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.