ADVERTISEMENT

‘ರಾಯಣ್ಣನ ದೇಶಭಕ್ತಿವರ್ಣಿಸಲು ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 13:56 IST
Last Updated 17 ಆಗಸ್ಟ್ 2019, 13:56 IST
ವಿಜಯಪುರದಲ್ಲಿ ಶನಿವಾರ ನಡೆದ ಸಮಾವೇಶವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು
ವಿಜಯಪುರದಲ್ಲಿ ಶನಿವಾರ ನಡೆದ ಸಮಾವೇಶವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು   

ವಿಜಯಪುರ: ‘ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನ ಮತ್ತು ದೇಶಭಕ್ತಿಯನ್ನು ವರ್ಣಿಸಲು ಪದಗಳು ಸಾಲುವುದಿಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಸಂಗೊಳ್ಳಿ ರಾಯಣ್ಣನ ಧ್ವಜ ಯಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣನಲ್ಲಿ ದೇಶಭಕ್ತಿ ಗಾಢವಾಗಿತ್ತು. ಕಿತ್ತೂರಿಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ. ಆತನ ಶೌರ್ಯ, ಸಾಹಸ, ಸ್ವಾಭಿಮಾನವನ್ನು ನಾವೆಲ್ಲರೂ ಸದಾ ಸ್ಮರಿಸಬೇಕು’ ಎಂದರು.

ADVERTISEMENT

ಉಪನ್ಯಾಸ ಮಂಡಿಸಿದ ಮೋಹನ ಮೇಟಿ, ‘ಸಂಗೊಳ್ಳಿ ರಾಯಣ್ಣ ದೇಶಭಕ್ತಿ ಹಾಗೂ ನಂಬಿಕೆಯ ಪ್ರತೀಕ. ದೇಶಾಭಿಮಾನದ ಇನ್ನೊಂದು ಹೆಸರೇ ರಾಯಣ್ಣ. ಆತ ಹಾಲುಮತ ಸಮಾಜದ ಆಸ್ತಿ ಮಾತ್ರವಲ್ಲ, ಎಲ್ಲ ಸಮಾಜಗಳ ಆಸ್ತಿ’ ಎಂದು ಬಣ್ಣಿಸಿದರು.

‘ಬ್ರಿಟಿಷರು ಮೋಸದಿಂದ ರಾಯಣ್ಣನನ್ನು ಬಂಧಿಸಿದರು. ಸ್ವಾತಂತ್ರ್ಯವೇ ರಾಯಣ್ಣನ ಉಸಿರಾಗಿತ್ತು. ಸಂಗೊಳ್ಳಿ ರಾಯಣ್ಣನ ಆದರ್ಶ, ಸ್ವಾಭಿಮಾನ ಹಾಗೂ ದೇಶಭಕ್ತಿಯ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು’ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ‘ಸಂಗೊಳ್ಳಿ ರಾಯಣ್ಣ ತನ್ನ ಜೀವನವನ್ನೇ ನಾಡಿನ ಸೇವೆಗಾಗಿ ಮುಡುಪಾಗಿಟ್ಟ. ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೂ ಅರ್ಪಿಸಿದ. ಗಲ್ಲಿಗೇರುವ ಸಂದರ್ಭದಲ್ಲಿ ನೀವು ಯಾರೂ ಅಳಬಾರದು ಎಂದು ಹೇಳಿ ನಗುತ್ತಲೇ ಗಲ್ಲಿಗೇರಿದ’ ಎಂದು ತಿಳಿಸಿದರು.

ಬಾವುಟ ಯಾತ್ರೆ: ಸಮಾವೇಶಕ್ಕೂ ಮುನ್ನ ನಡೆದ ರಾಯಣ್ಣನ ಬಾವುಟ ಯಾತ್ರೆಗೆ ಶಾಸಕ ಎಂ.ಬಿ.ಪಾಟೀಲ ಚಾಲನೆ ನೀಡಿದರು.
ಒಂದು ಕಿ.ಮೀ ಉದ್ದದ ರಾಯಣ್ಣನ ಧ್ವಜವನ್ನು ಹೊತ್ತು ಸಾವಿರಾರು ಯುವಕರು ಹೆಜ್ಜೆ ಹಾಕಿದರು.

ಕಾರ್ಯಕ್ರಮದ ರೂವಾರಿ ಹುಲಜಂತಿ ಮಾಳಿಂಗರಾಯ ಮಹಾರಾಜ, ವಹಿಸಿದ್ದರು. ಸೋಮೇಶ್ವರ ಸ್ವಾಮೀಜಿ, ಅಮರೇಶ್ವರ ಮಹಾರಾಜ, ರೇವಣಸಿದ್ಧೇಶ್ವರ ಸ್ವಾಮೀಜಿ, ಬುರಾಣಪೂರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.

ಉಮೇಶ ವಂದಾಲ, ಶರಣು ಸಬರದ, ಶಿವಾನಂದ ಭುಯ್ಯಾರ, ಸಲೀಂ ಉಸ್ತಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.