ಇಂಡಿ: ‘ಗ್ರಾಮೀಣ ಸ್ಪರ್ಧೆಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರಾಮೀಣ ಜನರು ಹಿಂದಿನ ಪರಂಪರೆ ಮುಂದುವರೆಸಿ ನಮ್ಮ ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ’ ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಲಕ್ಷ್ಮಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಲು ಎತ್ತುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆಧುನಿಕ ಯುಗದ ಒತ್ತಡದಲ್ಲಿ ಬದುಕುತ್ತಿರುವವರಿಗೆ ಮಾನಸಿಕ ನೆಮ್ಮದಿ ಬೇಕಿದ್ದವರು ಇಂತಹ ಜಾತ್ರೆಯಲ್ಲಿ ಪಾಲ್ಗೊಂಡು ದೈಹಿಕ ಕಸರತ್ತುಗಳನ್ನು ಮಾಡುವುದರಿಂದ ಜೀವನ ಪಾವನ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ’ ಎಂದರು.
ಹಾಲುಮತ ಸಮಾಜದ ಮುಖಂಡ ಮಹದೇವ ಪೂಜಾರಿ ಮಾತನಾಡಿ, ‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಂದೆ ಒಳ್ಳೆಯ ಅಧಿಕಾರಿಗಳಾಗಿ, ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.
ಗ್ರಾಮದ ಹಿರಿಯ ಮುಖಂಡರಾದ ಶಂಕರ್ ಮೇತ್ರಿ, ಸಂಗಪ್ಪ ಅಂಕಲಿಗೆ ,ಕಾಸು ಹಚಡದ ಶಾಮ್ ಪೂಜಾರಿ, ಮಡು ಹೊಸಮನಿ, ಜಗು ಸೋಮಾಗೋಳ ಮಾತನಾಡಿದರು. ಡೊಳ್ಳಿನ ಪದಗಳ ಸ್ಪರ್ಧೆ ಹಾಗೂ ಗುಂಡು ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಂದೇ ರಾತ್ರಿ ‘ಮಾತು ಕೇಳದ ಮಕ್ಕಳು, ನೀತಿಗೆಟ್ಟ ಸೊಸೆ’ ಎಂಬ ನಾಟಕವನ್ನು ಏರ್ಪಡಿಸಲಾಗಿತ್ತು ಹಾಗೂ ಕಲಾ ಸಿಂಚನ ಮೆಲೋಡಿಯಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿದವು.
ಇದಕ್ಕೂ ಮೊದಲು ರುದ್ರಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನೇಕ ವಾದ್ಯ ವೈಭವಗಳೊಂದಿಗೆ ಗ್ರಾಮದಲ್ಲಿ ದೇವಿಯ ಭವ್ಯ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.