ದೇವರಹಿಪ್ಪರಗಿ: ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ಆವರಣ ಸಂಪೂರ್ಣವಾಗಿ ಮಳೆ ನೀರಿನಿಂದ ಭರ್ತಿಯಾಗಿ ಮಕ್ಕಳು ಪರದಾಡುವಂತಾಗಿದೆ.
ನೀರು ನಿಲ್ಲದಂತೆ ಸ್ಥಳೀಯ ಆಡಳಿತ ತಕ್ಷಣ ಕ್ರಮಕೈಗೊಂಡು ಮಕ್ಕಳ ಆರೋಗ್ಯಯುತ ಕಲಿಕೆ ಅನುಕೂಲ ಮಾಡಿಕೊಡಬೇಕು ಎಂದು ಪಾಲಕರು, ಎಸ್.ಡಿ.ಎಂ.ಸಿ ಸದಸ್ಯರು ಆಗ್ರಹಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಮಳೆ ನೀರಿನಿಂದ ಆವೃತ್ತವಾಗಿ ಮಕ್ಕಳು ತರಗತಿಗಳಿಗೆ ತೆರಳಲು ಪರದಾಡುವಂತಾಗಿದೆ. ಮಕ್ಕಳ ಪ್ರಾರ್ಥನೆ, ಕ್ರೀಡಾ ಚಟುವಟಿಕೆಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಶಾಲಾ ಆವರಣದಲ್ಲಿ ನೀರು ಆವರಿಸಿರುವುದರಿಂದ ವರ್ಗಕೋಣೆಯಿಂದ ವಿದ್ಯಾರ್ಥಿಗಳು ಹೊರಗೆ ಕಾಲಿಡದಂತಾಗಿದೆ.
ನೀರು ನಿಲ್ಲುವ ಕುರಿತಂತೆ ಇಲ್ಲಿನ ಶಿಕ್ಷಕರು, ಮಕ್ಕಳು ಹಾಗೂ ಪಾಲಕರು ಕಳೆದ ವರ್ಷ ಶಾಸಕರಿಗೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣವೇ ಶಾಲಾ ಆವರಣದಲ್ಲಿನ ನೀರು ಶಾಶ್ವತವಾಗಿ, ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಶೀನಾಥ ತಳಕೇರಿ, ಸಿದ್ದು ಮೇಲಿನಮನಿ, ಸದಸ್ಯರಾದ ರಮೇಶ ಈಳಗೇರ, ಸಂಗಯ್ಯ ಗೋನ್ನಾಗರಮಠ, ಬಸಪ್ಪ ಬಾಗೇವಾಡಿ, ಶಿವಾನಂದ ರುದ್ರಗೌಡರ, ಜಹಾಂಗೀರ ವಡ್ಡೋಡಗಿ, ಪವಾಡೆಪ್ಪ ನಾವಿ, ರಾವುತರಾಯ ಬೋರಗಿ, ಶಿವಪುತ್ರ ರಳವಾರ ಸೇರಿದಂತೆ ಮಕ್ಕಳು, ಪಾಲಕರು ಆಗ್ರಹಿಸಿದ್ದಾರೆ.
ಶಾಲಾ ಆವರಣದಲ್ಲಿ ನೀರು ನಿಲ್ಲದಂತೆ ಸ್ಥಳೀಯ ಆಡಳಿತ ತ್ವರಿತ ಕ್ರಮ ಕೈಗೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕುಮಹಾನಂದಾ ಕುಂಬಾರ ಮುಖ್ಯಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.