ತಿಕೋಟಾ: ಸಮುದಾಯ, ಎಸ್‌ಡಿಎಂಸಿ ಹಾಗೂ ಪಾಲಕ, ಪೋಷಕರ ಸಹಕಾರದಿಂದ ಬಬಲೇಶ್ವರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ತೋಟದ ವಸ್ತಿ (ತಾವಂಶಿ ವಸ್ತಿ) ಹೆಬ್ಬಾಳಹಟ್ಟಿ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ಇಲ್ಲಿಯ ಶಿಕ್ಷಕರೆಲ್ಲರೂ ಸೇರಿ ಈರಪ್ಪ ಹಟ್ಟಿ ಎಂಬುವರನ್ನು ಸ್ವಯಂ ಸೇವಕರೆಂದು ನೇಮಕ ಮಾಡಿಕೊಂಡಿದ್ದು, ತಮ್ಮ ಸ್ವಂತ ಹಣದಿಂದ ಇವರಿಗೆ ಗೌರವಧನ ಹಾಗೂ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದಾರೆ. ಆ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಳ ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
1998ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು, ಶ್ರೀಶೈಲ ಪರಪ್ಪ ತಾವಂಶಿ ಎಂಬುವರು ಭೂದಾನ ಮಾಡಿದ್ದಾರೆ. ಸದ್ಯ 1 ರಿಂದ 5ನೇ ತರಗತಿವರೆಗೆ 44 ಮಕ್ಕಳು ಓದುತ್ತಿದ್ದು, ಎಲ್‌ಕೆಜಿ, ಯುಕೆಜಿಯಲ್ಲಿ 16 ಮಕ್ಕಳು ಇದ್ದಾರೆ.
ಶಾಲಾ ಮೈದಾನದಲ್ಲಿ 103 ಗಿಡಗಳಿದ್ದು, ಶಾಲೆಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಶಾಲೆಯ ವರ್ಗ ಕೋಣೆಗಳು ಅಂದ ಚಂದವಾಗಿದ್ದು, ಮಕ್ಕಳ ಕಲಿಕೆಗೆ ಸಹಾಯಕವಾಗುವ ಕಲಿಕೋಪಕರಣಗಳನ್ನು ಹೊಂದಿದೆ. ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮತಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರು ಈ ಶಾಲೆಗೆ ‘ಮಾತನಾಡುವ ಮರ’ವನ್ನು ಕೊಟ್ಟಿದ್ದು, ಅದರಿಂದ ಮಕ್ಕಳಿಗೆ ವಿವಿಧ ಕಥೆಗಳು, ಕವನಗಳು, ಮೂಲಾಕ್ಷರಗಳು, ಹಾಡು ಮತ್ತು ನೃತ್ಯಗಳನ್ನು ಬೋಧಿಸಲಾಗುತ್ತಿದೆ.
2005-06ನೇ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗೆ ‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿ ಲಭಿಸಿದೆ. ಈ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಶಾಲೆಯಲ್ಲಿ ಕಲಿತ ಪ್ರತಿ ವಿದ್ಯಾರ್ಥಿಯು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವುದು ವಿಶೇಷ. ಇದೇ ಶಾಲೆಯಲ್ಲಿ ಓದಿರುವ ನಾಲ್ಕು ಜನರು ಎಂ.ಟೆಕ್, ಒಬ್ಬರು ಎಂಬಿಬಿಎಸ್, ಒಬ್ಬರು ಎಂ.ಎಸ್ಸಿ ಕೃಷಿ, ಇಬ್ಬರು ಎಂಕಾಂ ವ್ಯಾಸಂಗ ಮಾಡಿದ್ದು, ಉನ್ನತ ಹುದ್ದೆಗಳಲ್ಲಿದ್ದಾರೆ.
ಕಲಿಕೋಪಕರಣಗಳ ತಯಾರಿಕೆಯಲ್ಲಿ ಮುಖ್ಯಶಿಕ್ಷಕ ಲಕ್ಷ್ಮಣ ಜಮದಾಡೆ ಹಾಗೂ ಗಾಯನ ಸ್ಪರ್ಧೆಯಲ್ಲಿ ಸಹಶಿಕ್ಷಕ ಎಲ್.ಎಸ್.ಕೋಳಿ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.