ADVERTISEMENT

ನೆರೆಯಲ್ಲಿ ನೆರವಾಗುವ ‘ಕಾಂಬೊ ಕಾರು’!

ವಸ್ತುಪ್ರದರ್ಶನ ವೀಕ್ಷಣೆಗೆ ಹರಿದು ಬಂದ ವಿದ್ಯಾರ್ಥಿಗಳ ದಂಡು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 11:23 IST
Last Updated 28 ಡಿಸೆಂಬರ್ 2019, 11:23 IST
ವಿಜಯಪುರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಆವಿಷ್ಕಾರ ವಿಜ್ಞಾನ ವಸ್ತು ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು
ವಿಜಯಪುರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಆವಿಷ್ಕಾರ ವಿಜ್ಞಾನ ವಸ್ತು ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು   

ವಿಜಯಪುರ: ಇಲ್ಲಿಯ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಆವಿಷ್ಕಾರ’ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನೆರೆ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ನೆರವಾಗುವಂತಹ ‘ಕಾಂಬೊ ಕಾರು’ ಮಾದರಿ ಗಮನ ಸೆಳೆಯಿತು.

ಉತ್ತರ ಕರ್ನಾಟಕದಲ್ಲಿ ಈಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಜನರ ರಕ್ಷಣೆಗೆ ಹರಸಾಹಸ ಪಡುತ್ತಿದ್ದ ದೃಶ್ಯಗಳನ್ನು ಕಣ್ಣಾರೆ ಕಂಡಿರುವ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಸನಾ ಪಿಯು ಕಾಲೇಜು ವಿದ್ಯಾರ್ಥಿಗಳಾದ ಸಮೀರ್‌ ಮುಕೇರಿ, ಇಮಾದ್‌ ಖಾಜಿ, ತೇಜ ಮನಕಾಂಡೆ, ಅಮರ್‌ ಹನಗಿಕಟ್ಟಿ ಅವರ ತಂಡ, ರಕ್ಷಣೆಗೆ ನೆರವಾಗುವ ಪರಿಕಲ್ಪನೆಯೊಂದಿಗೆ ಸಿದ್ಧಪಡಿಸಿದ ನೀರು ಮತ್ತು ನೆಲದ ಮೇಲೆ ಸಂಚರಿಸುವಂತಹ ‘ಕಾಂಬೊ ಕಾರು’ ಮಾದರಿ ಎಲ್ಲರ ಮೆಚ್ಚುಗೆ ಗಳಿಸಿತು.

‘ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ರಕ್ಷಣಾ ಪಡೆಗಳು ಸಾಕಷ್ಟು ಕಷ್ಟ ಪಡುತ್ತಿದ್ದವು. ಸುಲಭವಾಗಿ ರಕ್ಷಿಸಲು ಏನು ಮಾಡಬೇಕು ಎಂಬುದರ ಕುರಿತು ಸ್ನೇಹಿತರೊಂದಿಗೆ ಚರ್ಚೆಯಲ್ಲಿ ತೊಡಗಿದಾಗ, ನೀರು ಮತ್ತು ನೆಲದ ಮೇಲೆ ಸಂಚರಿಸುವ ವಾಹನ ಇದ್ದರೆ ಒಳ್ಳೆಯದು ಎಂಬ ವಿಚಾರ ಬಂದಿತು. ಅದೇ ಸಂದರ್ಭದಲ್ಲಿ ಪಟ್ಟಣದ ಕಾಲೇಜೊಂದಲ್ಲಿ ವಿಜ್ಞಾನ ವಸ್ತು ಪ್ರದರ್ಶನವಿತ್ತು. ನಾಲ್ಕು ಜನ ಸ್ನೇಹಿತರು ಸೇರಿ, ಯೋಚಿಸಿದಂತೆ ಕಾರು ಸಿದ್ಧಪಡಿಸಿದೆವು. ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಅದನ್ನೇ ಇಲ್ಲಿ, ಪ್ರದರ್ಶಿಸಲಾಗಿದ್ದು ಪ್ರತಿಯೊಬ್ಬರೂ ಶ್ಲಾಘಿಸಿದ್ದಾರೆ’ ಎಂದು ತಂಡದ ಸದಸ್ಯ ಸಮೀರ್‌ ಮುಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಡಿಮೆ ಖರ್ಚು, ಹೆಚ್ಚು ಕೆಲಸ: ಈಚೆಗೆ ಅಭಿವೃದ್ಧಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಮರಗಳ ಮಾರಣ ಹೋಮ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ, ನಾಶಪಡಿಸಿದ ಮರಗಳ ಬದಲಾಗಿ ಬೇರೆಡೆ ಸಸಿ ನೆಡುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಅದಕ್ಕೆ ಕಾರ್ಮಿಕರ ಕೊರತೆಯೂ ಹೆಚ್ಚಾಗಿ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆ ಜೊತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಗಿಡಗಳನ್ನು ವ್ಯವಸ್ಥಿತವಾಗಿ ನೆಡಲು ನೆರವಾಗುವ ‘ಆಟೊಮೆಟಿಕ್‌ ಪ್ಲಾಂಟಿಂಗ್‌ ವೆಹಿಕಲ್‌’ ಮಾದರಿ ಸಹ ಪ್ರದರ್ಶನದಲ್ಲಿ ಕಣ್ಮನ ಸೆಳೆಯಿತು.

‘10 ಜನರು ಒಂದು ಗಂಟೆಯಲ್ಲಿ ಮಾಡುವ ಕೆಲಸವನ್ನು ಆಟೊಮೆಟಿಕ್‌ ಪ್ಲಾಂಟಿಂಗ್‌ ವೆಹಿಕಲ್‌ ಕೆಲವೇ ನಿಮಿಷಗಳಲ್ಲಿ ಮಾಡುತ್ತದೆ. ಚಾಲಕರಿಲ್ಲದೆ ಜಿಪಿಎಸ್‌ ಮೂಲಕ ಸಸಿಗಳನ್ನು ನೆಡುವ ಜೊತೆಗೆ, ಆಳ ಮತ್ತು ವಿಸ್ತಾರವಾಗಿ ತೆಗ್ಗು ಕೊರೆಯುವ ಯಂತ್ರ ಅಳವಡಿಕೆ ಮಾಡಿದರೆ ದೊಡ್ಡ ಮರಗಳನ್ನು ಕಿತ್ತು ಬೇರೆಡೆ ನೆಡಬಹುದಾಗಿದೆ. ಇದರಿಂದ ನಾಶವಾಗುತ್ತಿರುವ ಪರಿಸರ ರಕ್ಷಿಸುವುದಲ್ಲದೆ, ಖರ್ಚು ಸಹ ಕಡಿಮೆ ಆಗಲಿದೆ’ ಬಾದಾಮಿಯ ಕಾಳಿದಾಸ ಪಿಯು ಕಾಲೇಜು ವಿದ್ಯಾರ್ಥಿಗಳಾದ ಮಹಮ್ಮದ್‌ಸಮೀರ್‌ ದೊಡ್ಡಮನಿ, ರಾಹುಲ್‌ ಜಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.