ಸಿಂದಗಿ: ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಶಾಂತವೀರ ಮನಗೂಳಿ ಮತ್ತು ಉಪಾಧ್ಯಕ್ಷರಾಗಿ ಸಂದೀಪ ಚೌರ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಘೋಷಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಶಾಂತವೀರ ಮನಗೂಳಿ ಮತ್ತು ಹಾಸೀಂಪೀರ್ ಆಳಂದ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಆಳಂದ ನಾಮಪತ್ರ ಹಿಂಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸಂದೀಪ ಚೌರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 23 ಸದಸ್ಯರಲ್ಲಿ 11ನೇ ವಾರ್ಡ್ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಮಾತ್ರ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರು. ಪುರಸಭೆ ಹಿಂದಿನ ಅಧ್ಯಕ್ಷ ಶಾಂತವೀರ ಬಿರಾದಾರ ಮತ್ತು ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯರಾದ ಶರಣಗೌಡ ಪಾಟೀಲ, ಪಾರ್ವತಿ ದುರ್ಗಿ, ಮಹಾಂತಗೌಡ ಬಿರಾದಾರ ಅವರು ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನ ಸಭಾಭವನದಿಂದ ಹೊರನಡೆದರು.
ವಿಜಯೋತ್ಸವ:
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಹಲಗೆ ಬಾರಿಸಿ ಸಂಭ್ರಮಸಿದರು. ಟಿಪ್ಪುಸುಲ್ತಾನ್ ವೃತ್ತದಿಂದ ಮೆರವಣಿಗೆ ನಡೆದು, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಅಭಿವೃದ್ಧಿಗೆ ಶ್ರಮಿಸುವೆ’
‘ಪುರಸಭೆ ಸದಸ್ಯರ ಸಹಕಾರದಿಂದ ಮತ್ತೆ ಅಧ್ಯಕ್ಷನಾಗಿರುವೆ. ನನಗಿರುವ ಐದು ತಿಂಗಳ ಅವಧಿಯಲ್ಲಿ ಅಭಿವೃದ್ಧಿಗಾಗಿ ಶ್ರಮಿಸುವೆ. ಜೂನ್ 1ರಂದು ಪಟ್ಟಣದ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ಕರೆದೊಯ್ಯಲಾಗುವುದು. ಹೆಚ್ಚಿನ ಅನುದಾನದ ಬೇಡಿಕೆ ಇಡಲಾಗುವುದು. ಪುರಸಭೆ ಕಚೇರಿ ಆಡಳಿತ ಸುಧಾರಣೆಗಾಗಿಯೂ ಕ್ರಮ ಜರುಗಿಸುವೆ’ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.