
ವಿಜಯಪುರದ ಎಲ್.ಬಿ.ಎಸ್ ಪ್ರಾಂಗಣ ಮೆಟ್ಟಿಲುಗಳ ವಿಹಂಗಮ ನೋಟ
– ಪ್ರಜಾವಾಣಿ ಚಿತ್ರ
ವಿಜಯಪುರ: ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣ ಮೆಟ್ಟಿಲುಗಳು ಈಗ ಆಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿವೆ. ಮಾರುಕಟ್ಟೆ ಪ್ರವೇಶಿಸುವವರು ಒಂದು ಕ್ಷಣ ನಿಂತು ನೋಡುವ ಮಟ್ಟಿಗೆ ಮೆಟ್ಟಿಲುಗಳಿಗೆ ಸುಂದರ ರೂಪ ನೀಡಲಾಗಿದೆ.
ನಗರದ ಬಿಎಲ್‌ಡಿಇ ಸಂಸ್ಥೆಯ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು`ಕ್ಯಾಂಪಸ್ ಟು ಕಮ್ಯೂನಿಟಿ' ಕಾರ್ಯಕ್ರಮದಡಿಯಲ್ಲಿ ಈ ಸ್ವಯಂ ಕಾರ್ಯವನ್ನು ಕೈಗೊಂಡಿದ್ದು, ಕೆಂಪು, ಹಸಿರು, ಹಳದಿ ಸೇರಿದಂತೆ ವಿಭಿನ್ನ ಬಣ್ಣಗಳನ್ನು ಮೆಟ್ಟಿಲುಗಳಿಗೆ ಮನಮೋಹಕವಾಗಿ ಹಚ್ಚಿದ್ದಾರೆ.
ಬಣ್ಣವನ್ನು ಮೆಟ್ಟಿಲುಗಳಿಗೆ ವೈಶಿಷ್ಟಪೂರ್ಣವಾಗಿ ಜೋಡಣೆ ಮಾಡಿರುವಂತೆ ‘ಫಜಲ್ ಕ್ಯೂಬ್ ಬಾಕ್ಸ್’ ನಂತೆ ಕಂಗೊಳಿಸುತ್ತಿವೆ.
ಪ್ರಾಂಗಣಕ್ಕೆ ಹೊಂದಿಕೊಂಡಿರುವ ಕಬ್ಬಿಣದ ಸೇತುವೆಗೂ ಬಣ್ಣ ಬಣ್ಣದ ರಂಗವಲ್ಲಿ ಮಾದರಿಯಲ್ಲಿ ಅಲಂಕಾರ ಮಾಡಿದ್ದು, ಮೇಲ್ಭಾಗದಿಂದ ಈ ದೃಶ್ಯ ಎಲ್ಲರ ಮನ ಸೆಳೆಯುತ್ತಿದೆ.
ಪಕ್ಕದಲ್ಲಿಯೇ ಇರುವ ಜನ ಸಂಚಾರದ ಸೇತುವೆಯಿಂದ ಮೆಟ್ಟಿಲುಗಳಿಗೆ ಪ್ರವೇಶಿಸಿದಾಗ ರಂಗು ರಂಗಿನಿಂದ ಕಂಗೊಳಿಸುವ ಮೆಟ್ಟಿಲುಗಳು ಪ್ರತಿಯೊಬ್ಬರ ಗಮನವನ್ನು ಕೇಂದ್ರಿಕರಿಸುತ್ತಿವೆ.
ವಿದ್ಯಾರ್ಥಿಗಳ ಈ ಕಾರ್ಯ ಅಪೂರ್ವ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶಂಸೆ ವ್ಯಕ್ತವಾಗಿದ್ದು, ಎಲ್‌ಬಿಎಸ್ ಪ್ರಾಂಗಣದ ಮೊದಲಿನ ಚಿತ್ರ ಹಾಗೂ ಈಗಿನ ಚಿತ್ರ ಹೋಲಿಕೆ ಮಾಡುವ ಫೋಟೋಗಳು ಹರಿದಾಡುತ್ತಿವೆ. ಅನೇಕರು ಪ್ರಾಂಗಣದ ಮೆಟ್ಟಿಲುಗಳ ನವ ರೂಪ ನೀಡಲು ಮಾರುಕಟ್ಟೆಗೆ ಆಗಮಿಸುತ್ತಿರುವುದು ಇನ್ನೊಂದು ವಿಶೇಷ.
ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಸದಸ್ಯ ಅಶೋಕ ನ್ಯಾಮಗೌಡ, ವಿಠ್ಠಲ ಹೊಸಪೇಟ ಸೇರಿದಂತೆ ಅನೇಕರು ವಿದ್ಯಾರ್ಥಿಗಳ ಈ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಾಚಾರ್ಯ ಡಾ.ಮಂಜುನಾಥ ಹಾಗೂ ವಾಸ್ತುಶಿಲ್ಪ ತಜ್ಞ ರವೀಂದ್ರ ಜಮ್ಮನಕಟ್ಟಿ, ವಾಸ್ತು ಶಿಲ್ಪ ವಿಭಾಗದ ಮುಖ್ಯಸ್ಥ ಸತೀಶ ನಡುವಿನಮನಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಕಾರ್ಯವನ್ನು ಸಾಕಾರಗೊಳಿಸಿದ್ದಾರೆ.
ವಿದ್ಯಾರ್ಥಿಗಳು ಲಾಲ್ ಬಹಾದ್ದೂರ ಶಾಸ್ತ್ರಿಜಿ ಮಾರುಕಟ್ಟೆಗೆ ವಿಶೇಷ ಸೌಂದರ್ಯ ಹಾಗೂ ಮೆರಗು ನೀಡುವ ಕಾರ್ಯವನ್ನು ಕೈಗೊಂಡಿರುವುದು ಸಂತೋಷ ತರಿಸಿದೆ ಇದರಿಂದ ಮಾರುಕಟ್ಟೆಯ ವೈಭವ ಮತ್ತಷ್ಟು ಹೆಚ್ಚಾಗಿದೆ.-ಅಶೋಕ ನ್ಯಾಮಗೌಡ, ಸದಸ್ಯರು ಮಹಾನಗರ ಪಾಲಿಕೆ
ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ದೃಷ್ಟಿಯಿಂದ ಹಾಗೂ ಸಮಾಜಕ್ಕೂ ಉಪಯೋಗವಾಗುವ ಕಾರ್ಯವಾಗಬೇಕು ಎಂಬ ದೃಷ್ಟಿಯಿಂದ ಮೆಟ್ಟಿಲುಗಳಿಗೆ ಅಂದದ ರೂಪ ನೀಡುವ ಕಾರ್ಯ ಕೈಗೊಳ್ಳಲಾಗಿದೆ-ರವೀಂದ್ರ ಜಮ್ಮನಕಟ್ಟಿ, ವಾಸ್ತುಶಿಲ್ಪ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.