ADVERTISEMENT

ಶಿವಾಜಿ ಹೊಯ್ಸಳ ವಂಶಸ್ಥರು: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 15:32 IST
Last Updated 2 ಮಾರ್ಚ್ 2021, 15:32 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   

ಕಾಖಂಡಕಿ (ವಿಜಯಪುರ): ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕದ ಮೂಲದವರು. ಕನ್ನಡದವರೇ ಆಗಿದ್ದು, ಇತಿಹಾಸದ ಆಳಕ್ಕೆ ಇಳಿದು ನೋಡಿದರೆ ಅವರು ಹೊಯ್ಸಳ ವಂಶಸ್ಥರೇ ಆಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಿತ್ರ ಮಂಡಳಿಯಿಂದ ಆಯೋಜಿಸಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರು ಹುಟ್ಟದೇ ಹೋಗಿದ್ದರೆ ಇಂದು ಹಿಂದು ಧರ್ಮ ಉಳಿಯುತ್ತಿರಲಿಲ್ಲ. ಹಿಂದು ಧರ್ಮದ ಉಳಿಯುವಿಗಾಗಿ ಶ್ರಮಿಸಿದ್ದ ಅವರನ್ನು ಸ್ಮರಣೆ ಮಾಡೋ ಮೂಲಕ ಅವರ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದರು.

ADVERTISEMENT

ಶಿವಾಜಿ ಮಹಾರಾಜರ ಹೆಸರು ದೇಶದ 130 ಕೋಟಿ ಜನಸಂಖ್ಯೆಗೆ ಗೊತ್ತಾಗಬೇಕು. ಅಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜನೆ ಮಾಡಬೇಕು. ಶಿವಾಜಿ ಮಹಾರಾಜರು ಕನ್ನಡಿಗರು. ಇಲ್ಲಿರೋ ಮರಾಠಾ ಜಾತಿಯ ಜನರೂ ಕೂಡ ಕನ್ನಡಿಗರೇ ಆಗಿದ್ದಾರೆ. ಶಿವಾಜಿ ಮಹಾರಾಜರು ತಮಗಾಗಿ ಸಾಮ್ರಾಜ್ಯ ಕಟ್ಟಲಿಲ್ಲ. ದೇಶ ರಕ್ಷಣೆಗಾಗಿ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯವನ್ನು ಕಟ್ಟಿದಂತವರು ಎಂದು ಹೇಳಿದರು.

ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಮಾತನಾಡಿ, ದೇಶದಲ್ಲಿ ಹಿಂದು ಧರ್ಮದ ರಕ್ಷಣೆಗಾಗಿ ಮೂರು ಜನಾಂಗದವರ ಕೊಡುಗೆ ಅತ್ಯಮೂಲ್ಯವಾಗಿದೆ. ಮರಾಠರು, ಸಿಖ್ಖರು ಹಾಗೂ ರಜಪೂತರು ಹಿಂದು ಧರ್ಮವನ್ನು ಮುಸಲ್ಮಾನರ ದಬ್ಬಾಳಿಕೆಯಿಂದ ಉಳಿಸಿದರು. ಹೀಗಾಗಿ ಇಂತಹ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದು ಹೇಳಿದರು.

ಕಾಖಂಡಕಿಯ ಗುರುದೇವಾಶ್ರಮದ ಸಂದೀಪ ಮಹೋದಯರು, ಹಿರೇಮಠದ ಸಿದ್ದರಾಮಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಹಶೀಲ್ದಾರರಾಗಿ ಆಯ್ಕೆಯಾಗಿರುವ ಕಾಖಂಡಕಿ ಗ್ರಾಮದ ಆರ್. ಕವಿತಾ ಅವರನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸನ್ಮಾನಿಸಿದರು.

ಗ್ರಾಮದ ಯುವ ಮುಖಂಡರಾದ ರಾಮನಗೌಡ ಭೀ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಗುರುಲಿಂಗಪ್ಪ ಅಂಗಡಿ, ಅಪ್ಪುಗೌಡ ಪಾಟೀಲ, ಅರ್ಜುನ ದೇವಕ್ಕಿ, ಕಾಖಂಡಕಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಾನುಬಾ ಸಿಂಧೆ, ಜಿ.ಪಂ. ಮಾಜಿ ಸದಸ್ಯ ಮುತ್ತಪ್ಪ ಶಿವನ್ನವರ, ಮರಾಠ ಮಹಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಚವ್ಹಾಣ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಭೀಮಾಶಂಕರ ಶಿವಾಳಕರ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಘಾಟಗೆ, ಬಿ.ಟಿ.ತರಸೆ, ಸುಭಾಸ ವಿಕ್ರಮ, ಜ್ಯೋತಿಬಾ ಮೋರೆ, ವಿಜಯಪುರ ತಾಲ್ಲೂಕು ಮರಾಠಾ ಸಮಾಜದ ಅಧ್ಯಕ್ಷ ರಾಮು ಜಾಧವ, ಕೃಷ್ಣಾ ಜಾಧವ, ವಸಂತ ಜಗತಾಪ, ಸುರೇಶ ಗೌಡಪ್ಪಗೋಳ, ಅಡವಯ್ಯ ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.