ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿಗಳಿಗೆ ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಮನವರಿಕೆ ಮಾಡಿದ್ದೇವೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಮೊನ್ನೆ ಕರೆದಿದ್ದ ಸಚಿವರ ಸಭೆಯಲ್ಲಿ ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದೇವೆ, ಈ ಹಿಂದೆಯೂ ಸದನದಲ್ಲಿ ನಾನೇ ಮೂರು ಬಾರಿ ಪ್ರಶ್ನೆ ಮಾಡಿದ್ದೇನೆ ಎಂಬುದನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ್ದೇನೆ ಎಂದರು.
₹400 ಕೋಟಿ ಅನುದಾನ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದಾಗ, ನಮ್ಮ ಜಿಲ್ಲೆಯಲ್ಲಿ ₹ 100 ರಿಂದ ₹150 ಕೋಟಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗಲಿದೆ ಎಂದು ಮನವರಿಕೆ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರಿಗೂ ಹೇಳಿದ್ದು, ಅವರೂ ಒಪ್ಪಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಈ ವಿಷಯವನ್ನು ಚರ್ಚೆ ಮಾಡಿದಾಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದಾರೆ ಎಂದರು.
ವಿಜಯಪುರ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಸ್ವಯಂ ಪ್ರೇರಿತವಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಯಾರದೇ ಕುಮ್ಮಕ್ಕು ಇದೆ ಎಂಬುದರಲ್ಲಿ ಅರ್ಥವಿಲ್ಲ. ಧರಣಿ ಕುಳಿತವರು ಅಪರಾಧಿ-ನಿರಪರಾಧಿ ಎಂದು ಸಂಬೋಧಿಸುವುದು ಸರಿಯಲ್ಲ ಎಂದರು.
ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ನಿರ್ಧರಿಸಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ. ನಮ್ಮ ಸರ್ಕಾರದ ಅವಧಿಯಲ್ಲಾಗಿಲ್ಲ, ಈ ಕುರಿತು ಮರು ಪರಿಶೀಲನೆ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಕಾನೂನು ಪ್ರಕ್ರಿಯೆ ಮುಗಿದ ಮೇಲೆ ಸರಳವಾಗಿ ಕಾಲೇಜು ಸ್ಥಾಪನೆಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಸರ್ಕಾರಿ ಮೆಡಿಕಲ್ ಕಾಲೇಜು ನಮ್ಮ ಹಕ್ಕು. ಬಡವರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು ನಮ್ಮ ಮಕ್ಕಳು ಕಲಿಯದಿದ್ದರು ಮುಂದಿನ ನಮ್ಮ ಪೀಳಿಗೆಗಾಗಿ ಸರ್ಕಾರ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕುಮಲ್ಲಿಕಾರ್ಜುನ ಯಂಡಿಗೇರಿ ಜೆಡಿಎಸ್ ಮುಖಂಡ
30 ದಿನ ಪೂರೈಸಿದ ಹೋರಾಟ
ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 30 ದಿನ ಪೂರೈಸಿತು. ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ ಭಗವಾನ್ ರೆಡ್ಡಿಲಲಿತಾ ಬಿಜ್ಜರಗಿ ಅಕ್ರಂಮಾಷಳಕರ ಪ್ರಭುಗೌಡ ಪಾಟೀಲ ಸುರೇಶ ಬಿಜಾಪುರ ಲಕ್ಷ್ಮಣ ಹಂದ್ರಾಳಭರತಕುಮಾರ ಎಚ್.ಟಿ ಮಲ್ಲಿಕಾರ್ಜುನ ಎಚ್.ಟಿ ಬಾಬುರಾವ್ ಬೀರಕಬ್ಬಿ ಸಂಗನಬಸವೇಶ್ವರ ಸ್ವಾಮೀಜಿ ಬಸವರಾಜ ಸುತ್ತಗುಂಡಿ ಮಹದೇವಪ್ಪ ತೇಲಿ ಗಿರೀಶ ಕಲಘಟಗಿ ಶೇಷರಾವ್ ಮಾನೆ ಲಕ್ಷ್ಮಣ ಕಂಬಾಗಿ ಚೆನ್ನು ಕಟ್ಟಿಮನಿ ಸಲೀಂ ವಜ್ರಾಣಿ ಜಗದೇವ ಸೂರ್ಯವಂಶಿ ಬೋಗೇಶ್ ಸೋಲಾಪುರ ನಾಗರಾಜ ಕಲ್ಲಕುಟುಗರ ಗೀತಾ ಎಚ್ ನೀಲಮ್ಮ ಬಿರಾದಾರ ಕಾವೇರಿ ರಜಪೂತ ಮಹದೇವಿ ಧರ್ಮಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.