ADVERTISEMENT

ಗಲಭೆ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 15:35 IST
Last Updated 24 ಡಿಸೆಂಬರ್ 2019, 15:35 IST
Basangouda Patil Yatnal
Basangouda Patil Yatnal   

ವಿಜಯಪುರ: ‘ಗಲಭೆ ಮಾಡುವವರನ್ನು ಮತ್ತು ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಸತ್ತವರು ಅಮಾಯಕರು, ದೇಶಭಕ್ತರಲ್ಲ. ಅವರಿಗೆ ನೀಡಿರುವ ತಲಾ ₹10 ಲಕ್ಷ ಪರಿಹಾರವನ್ನು ಸಿಎಂ ಕೂಡಲೇ ವಾಪಸು ಪಡೆಯಬೇಕು. ಆ ಹಣವನ್ನು ಪೊಲೀಸರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದಂತೆ ದೇಶ ವಿರೋಧಿಗಳ ಕುಮ್ಮಕ್ಕು ಇದೆ. ದೇಶ ದ್ರೋಹಿಗಳ ವರ್ತನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದ್ದಾರೆ’ ಎಂದರು.

ADVERTISEMENT

‘ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವ ಸಂಸ್ಕೃತಿಯನ್ನು ನಿಲ್ಲಿಸಬೇಕು. ದೇಶಭಕ್ತರಿಗೆ ಹಾಗೂ ಗೋ ರಕ್ಷಕರಿಗೆ ಪರಿಹಾರ ಕೊಡಬೇಕು. ಮೃತಪಟ್ಟವರು ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ₹5 ಲಕ್ಷ ಪರಿಹಾರ ಕೊಟ್ಟಿದ್ದಾರೆ, ಅವರಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

‘ಸಮಾಜಘಾತುಕರಿಗೆ ಬೆಂಬಲ ಕೊಡುವ ಎರಡೂ ರಾಜಕೀಯ ಪಕ್ಷಗಳ ಮುಖಂಡರು ಪೊಲೀಸ್ ಇಲಾಖೆಯ ಕ್ಷಮೆ ಕೇಳಬೇಕು. ಈ ಘಟನೆಯಲ್ಲಿ ಯು.ಟಿ.ಖಾದರ್ ಕುಮ್ಮಕ್ಕು ಇರುವುದು ಕಂಡು ಬಂದಿದೆ. ದೇಶದ್ರೋಹಿಗಳಿಗೆ ಖಾದರ್ ಬೆಂಬಲ ಕೊಡುತ್ತಿದ್ದಾರೆ. ಹೀಗಾಗಿ, ಅವರ ಮೇಲೆ ತನಿಖೆ ನಡೆಸಬೇಕು. ಗಲಭೆಗೆ ಕಾರಣರಾದವರ ಆಸ್ತಿ ಜಪ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಬಾದಾಮಿ ಬಿಟ್ಟು ಬಾರದ ಸಿದ್ದರಾಮಯ್ಯ, ಪ್ರಾಣ ಹೋದರೂ ಪರವಾಗಿಲ್ಲ ಎಂದು ಸಿನಿಮಾ ಡೈಲಾಗ್ ಹೇಳುತ್ತಾರೆ. ಹಿಂದೂಗಳು ಯಾರೂ ಇವರಿಗೆ ಮತ ಹಾಕಿಲ್ಲವೆ, ಬರಿ ಮುಸ್ಲಿಮರೇ ಮತ ಹಾಕಿದ್ದಾರಾ’ ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.