ADVERTISEMENT

ಶ್ರೀಹರ್ಷಗೌಡ ನೇತೃತ್ವದ ಹಳೇ ಪೆನಾಲ್‌ ಜಯಭೇರಿ

ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ ಚುನಾವಣೆ: 5148 ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 16:50 IST
Last Updated 8 ನವೆಂಬರ್ 2020, 16:50 IST
ವಿಜಯಪುರದ ಎಸ್‌.ಎಸ್‌.ಹೈಸ್ಕೂಲ್‌ ಆವರಣದಲ್ಲಿ ಭಾನುವಾರ ನಡೆದ ಶ್ರಿ ಸಿದ್ಧೇಶ್ವರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಸೇರಿದ್ದ ಮತದಾರರು –ಪ್ರಜಾವಾಣಿ ಚಿತ್ರ
ವಿಜಯಪುರದ ಎಸ್‌.ಎಸ್‌.ಹೈಸ್ಕೂಲ್‌ ಆವರಣದಲ್ಲಿ ಭಾನುವಾರ ನಡೆದ ಶ್ರಿ ಸಿದ್ಧೇಶ್ವರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಸೇರಿದ್ದ ಮತದಾರರು –ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿನಒಟ್ಟು 19 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಶ್ರೀಹರ್ಷ ಗೌಡ ಪಾಟೀಲ ನೇತೃತ್ವದ ಹಳೇ ಪೆನಾಲ್ ಅಭೂತಪೂರ್ವ‌ ಜಯಬೇರಿ ಬಾರಿಸಿದೆ.

ಸಾಮಾನ್ಯ ಮತ ಕ್ಷೇತ್ರದಿಂದ ಹಾಲಿ ನಿರ್ದೇಶಕರಾದ ಶ್ರೀಹರ್ಷಗೌಡ ಪಾಟೀಲ, ವಿಜಯಕುಮಾರ್ ಅವರಂಗಬಾದ್‌, ವಿಜಯಕುಮಾರ ಇಜೇರಿ, ವೈಜನಾಥ ಕರ್ಪೂರಮಠ, ಸುರೇಶ ಗಚ್ಚಿನಕಟ್ಟಿ, ಗುರುಪಾದಯ್ಯ ಗಚ್ಚಿನಮಠ, ಈರಣ್ಣ ಪಟ್ಟಣಶೆಟ್ಟಿ, ಡಾ.ವಿಜಯಕುಮಾರ ಪಾಟೀಲ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ರವೀಂದ್ರ ಬಿಜ್ಜರಗಿ, ರಮೇಶ ಬಿದನೂರ ಮತ್ತು ಸದಾಶಿವ ಶಾಂತಪ್ಪ ಪುನರಾಯ್ಕೆಯಾಗಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಹಳೇ ಪೆನಾಲ್‌ನ ಸೌಭಾಗ್ಯ ಭೋಗಶೆಟ್ಟಿ ಮತ್ತು ಬೋರಮ್ಮ ಬಾಬು ಗೊಬ್ಬರ ಆಯ್ಕೆಯಾಗಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ಸಾಯಬಣ್ಣ ಸಿದ್ಧಪ್ಪ ಭೋವಿ, ಹಿಂದುಳಿದ ವರ್ಗ ’ಅ’ ನಿಂದ ಗುರುರಾಜ ಸಿದ್ದಪ್ಪ ಗಂಗನಹಳ್ಳಿ, ಹಿಂದುಳಿದ ವರ್ಗ ‘ಬ’ದಿಂದ ಪ್ರಕಾಶ ಶಿವಪ್ಪ ಬಗಲಿ ಪುನರಾಯ್ಕೆಯಾಗಿದ್ದಾರೆ.

ನಾಯ್ಕೋಡಿ ಒಬ್ಬರೇ ಹೊಸ ಆಯ್ಕೆ: ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ನಡೆದ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಸ್ವತಂತ್ರ ಅಭ್ಯರ್ಥಿ ಅಮೋಘಸಿದ್ಧ ನಾಯ್ಕೋಡಿ ಗೆಲುವು ದಾಖಲಿದ್ದು, ಹಳೇ ಪೆನಾಲ್‌ನ ಸದಾಶಿವ ಪೀರಪ್ಪ ಹಾರುಗೇರಿ ಸೋಲನುಭವಿಸಿದರು.

ಹಾಲಿ ನಿರ್ದೇಶಕರನ್ನೇ ಅವಿರೋಧವಾಗಿ ಆಯ್ಕೆ ಮಾಡುವ ಸಂಬಂಧ ಚುನಾವಣೆಗೂ ಮುನ್ನ ನಡೆದ ಕಸರತ್ತು ಕೊನೆ ಕ್ಷಣದಲ್ಲಿ ವಿಫಲವಾಗಿತ್ತು.

ವಿಜಯೋತ್ಸವ: ಸಂಜೆ 5ಕ್ಕೆ ಆರಂಭವಾದ ಮತ ಎಣಿಕೆ ರಾತ್ರಿ 10ರ ವರೆಗೂ ನಡೆಯಿತು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜಯಗಳಿಸಿದ ನೂತನ ನಿರ್ದೇಶಕರಿಗೆ ಬೆಂಬಲಿಗರು ಹೂಹಾರ ಹಾಕಿ, ಸಿಹಿ ಹಂಚುವ ಮೂಲಕ ಅಭಿನಂದಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

5148 ಮತ ಚಲಾವಣೆ: ಬೆಳಿಗ್ಗೆ 9ರಿಂದ ಆರಂಭವಾದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಸಂಜೆ 4ರ ವರಗೆ ನಡೆದ ಚುನಾವಣೆಯಲ್ಲಿಒಟ್ಟು 6347 ಮತದಾರರ ಪೈಕಿ 5148 ಮತದಾರರು(ಶೇ 81) ತಮ್ಮ ಹಕ್ಕು ಚಲಾಯಿಸಿದರು. ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭೆ ಚುನಾವಣೆಗಿಂತ ಶ್ರೀ ಸಿದ್ದೇಶ್ವರ ಬ್ಯಾಂಕಿನ ಚುನಾವಣೆ ಕುತೂಹಲ ಕೆರಳಿಸಿತ್ತು.

ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೇ, ಕೋವಿಡ್‌ ಸಂಬಂಧ ಮಾಸ್ಕ್‌, ಸ್ಯಾನಿಟೈಜರ್‌ ಕಡ್ಡಾಯ ಮಾಡಲಾಗಿತ್ತು. ಆದರೆ, ಪರಿಸ್ಪರ ಅಂತರ ಮಾಯವಾಗಿತ್ತು. ಆಶಾ ಕಾರ್ಯಕರ್ತೆಯರು ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಿಯೇ ಮತಗಟ್ಟೆ ಒಳಗೆ ಬಿಟ್ಟರು. ಚುನಾವಣಾಧಿಕಾರಿ ಪಿ.ಬಿ.ಕಾಳಗಿ ನೇತೃತ್ವದಲ್ಲಿ ಚುನಾವಣೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಶಾಂತಿಯುತವಾಗಿ ಹಾಗೂ ಸುಸುತ್ರವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.