ADVERTISEMENT

ವಿಜಯಪುರ ಜನತೆ ಪರವಾಗಿ ಸಿಎಂಗೆ ಸನ್ಮಾನ: ಸಚಿವ ಎಂ.ಬಿ.ಪಾಟೀಲ

ರಾಜ್ಯದಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:12 IST
Last Updated 8 ಜನವರಿ 2026, 2:12 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು –ಪ್ರಜಾವಾಣಿ ಚಿತ್ರ   
ಮಧ್ಯಾಹ್ನ 12.30ಕ್ಕೆ ದರ್ಬಾರ್ ಮೈದಾನದಲ್ಲಿ ಕಾರ್ಯಕ್ರಮ | ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಯಾರ ವಿರೋಧವೂ ಇಲ್ಲ | ಸಿಎಂರಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ

ವಿಜಯಪುರ: ರಾಜ್ಯದಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರಿಗೆ ಜನವರಿ 9ರಂದು ಜಿಲ್ಲೆಯ ಜನತೆಯ ಪರವಾಗಿ ಗೌರವಾರ್ಪಣೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮ ಕಾಂಗ್ರೆಸ್‌ ಕಾರ್ಯಕ್ರಮವಾಗಿರುವುದಿಲ್ಲ, ಪಕ್ಷಾತೀತವಾಗಿರಲಿದೆ. ಜಿಲ್ಲೆಯ ಜನತೆ ಹೆಮ್ಮೆ ಪಡುವ ಕಾರ್ಯಕ್ರಮ ಮಾಡಲಾಗುವುದು,  ಎಲ್ಲರೂ ಭಾಗವಹಿಸಬೇಕು ಎಂದು ಆಹ್ವಾನಿಸಿದರು.

ಅಂದು ಬೆಳಿಗ್ಗೆ 11.30ಕ್ಕೆ ವಿಜಯಪುರಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಾದ ಬೈರತಿ ಸುರೇಶ್‌, ರಾಮಲಿಂಗರೆಡ್ಡಿ, ಮಹಾದೇವಪ್ಪ, ಸುಧಾಕರ, ಕೆ.ಜೆ.ಜಾರ್ಜ್ ಸೇರಿದಂತೆ ಇನ್ನಿತರ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದರು.  

ADVERTISEMENT

ಆರಂಭದಲ್ಲಿ ಕೇಂದ್ರ ಬಸ್ ನಿಲ್ದಾಣದ ಆವರಣದ ಎದುರು ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಉದ್ಘಾಟನೆ, ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ನಾಮಕರಣ ಅನಾವರಣ, ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ, ಜಿಲ್ಲಾ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಬಳಿಕ ಮಧ್ಯಾಹ್ನ 12.30ಕ್ಕೆ ನಗರದ ದರ್ಬಾರ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪಕ್ಷಾತೀತವಾಗಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಯಾರ ವಿರೋಧವೂ ಇಲ್ಲ. ಈಗಾಗಲೇ ಕೂಡಲಸಂಗಮದ  ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಮಾತನಾಡಿದ್ದು, ಅವರೆಲ್ಲೂ ಒಪ್ಪಿದ್ದಾರೆ ಮತ್ತು ಭಾಗವಹಿಸಲಿದ್ದಾರೆ ಎಂದರು.

ಸಿಎಸ್‌ಆರ್ ಅನುದಾನದಲ್ಲಿ ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿ ಆರಂಭಿಸುವ ಉದ್ದೇಶ ಇದೆ ಎಂದು ಸಚಿವರು ಹೇಳಿದರು.

ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಸಿದ್ದೇಶ್ವರ ಸ್ವಾಮೀಜಿ, ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣ ಹೆಸರು ನಾಮಕರಣ ಮಾಡಲು ಈಗಾಗಲೇ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.

ವಿಜಯ‍ಪುರದಲ್ಲಿ ಆಡಳಿತ ನಡೆಸಿರುವ ಆದಿಲ್‌ ಶಾಹಿ ರಾಜರ ಹೆಸರನ್ನು ಮುಂದಿನ ದಿನಗಳಲ್ಲಿ ಯಾವುದಾದರೂ ಸರ್ಕಾರಿ ಕಟ್ಟಡ ಅಥವಾ ಪ್ರಮುಖ ಮಾರ್ಗಕ್ಕೆ ಇಡಲಾಗುವುದು ಎಂದು ಹೇಳಿದರು.

ಕೈಗಾರಿಕಾ ಸಚಿವನಾಗಿ ಈಗಾಗಲೇ ಜಿಲ್ಲೆಗೆ ಹಲವು ಕೈಗಾರಿಕೆಗಳನ್ನು ತರಲು ಪ್ರಯತ್ನಿಸಿದ್ದೇನೆ. ಕೈಗಾರಿಕೆಗಳ ಆರಂಭದಿಂದ ಜಿಲ್ಲೆಯ 10 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಕೆಲಸ ಮಾಡಲಾಗುವುದು ಎಂದರು.

ಹುಬ್ಬಳ್ಳಿ ಮತ್ತು ಗದುಗಿನಲ್ಲಿ ಬೈಪಾಸ್‌ ಮಾರ್ಗಗಳನ್ನು ವೇಗವಾಗಿ ನಿರ್ಮಿಸುವ ಮೂಲಕ ವಿಜಯಪುರ- ಬೆಂಗಳೂರು ನಡುವೆ  ರೈಲುಗಳ ಸಂಚಾರ ಅವಧಿಯನ್ನು 14 ಗಂಟೆಯಿಂದ 10 ಗಂಟೆಗೆ ಇಳಿಸಲಾಗಿದೆ.  ಶೀಘ್ರ ಸಂಚಾರಕ್ಕೆ ಶ್ರಮಿಸಿದವನು ನಾನು, ಸಂಸದರ ಕೊಡುಗೆ ಏನೂ ಇಲ್ಲ ಎಂದರು.

ಶಾಸಕ ಪ್ರೊ. ರಾಜು ಆಲಗೂರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಮಕ್ಬೂಲ್ ಬಾಗವಾನ, ಮುಖಂಡರಾದ ರಫೀಕ ಟಪಾಲ, ಅಬ್ದುಲ್‌ ರಜಾಕ ಹೊರ್ತಿ, ಡಾ. ಪ್ರಭುಗೌಡ ಪಾಟೀಲ, ಕಾಂಗ್ರೆಸ್ ಮಹಿಳಾ ಘಟಕದ  ಅಧ್ಯಕ್ಷೆ ರಮೇಜಾ ನದಾಫ ಉಪಸ್ಥಿತರಿದ್ದರು.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ನಿಶ್ಚಿತ. ಯಾವುದೇ ಕಾರಣಕ್ಕೂ ಪಿಪಿಪಿ ಇಲ್ಲ. ನಾಳೆ ಜಿಲ್ಲೆಗೆ ಬರುವ ಸಿಎಂ ಕೂಡ ಘೋಷಣೆ ಮಾಡಲಿದ್ದಾರೆ. ಹೋರಾಟಗಾರರು ನನ್ನ ಮೇಲೆ ವಿಶ್ವಾಸ ಇಡಿ.
ಎಂ.ಬಿ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.