
ವಿಜಯಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವರ ಈ ದರಿದ್ರ ರಾಜಕಾರಣ ಕರ್ನಾಟಕದ ಜನತೆಗೆ ಶಾಪವಾಗಿ ಪರಿಣಮಿಸಿದೆ’ ಎಂದು ಸಂಸದ ಜಿಗಜಿಣಗಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಸಂಪೂರ್ಣ ಹಾಳಾಗಿದೆ. ಹಾಡುಹಗಲೇ ಕೊಲೆ, ಸುಲಿಗೆ ನಡೆಯುತ್ತಿವೆ, ಬೆಂಗಳೂರಿನಲ್ಲಿಯೇ ಹಾಡು ಹಗಲೇ ₹7 ಕೋಟಿ ರೂಪಾಯಿ ದೋಚಲಾಗಿದೆ. ವಿಜಯಪುರದಲ್ಲಿ ಎರಡು ಬ್ಯಾಂಕಗಳು ದರೋಡೆಯಾಗಿ ₹100 ಕೋಟಿಗೂ ಅಧಿಕ ಸ್ವತ್ತು ಕಳ್ಳತನವಾಗಿದೆ. ಒಟ್ಟಾರೆಯಾಗಿ ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಿನ ಬೆಳಗಾದರೆ ಈ ರೀತಿಯ ಬೆಚ್ಚಿಬೀಳಿಸುವ ಘಟನೆಗಳು ಸಾಮಾನ್ಯವಾಗಿವೆ, ಪ್ರತಿಯೊಬ್ಬರು ಮನೆಯಿಂದ ಹೊರಬರಲು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಅತ್ತ ಉಗ್ರಗಾಮಿಗಳಿಗೆ ಜೈಲಿನಲ್ಲಿ ಆತಿಥ್ಯ ನೀಡಲಾಗುತ್ತಿದೆ, ಹೊರಗಡೆ ಅಪರಾಧ ಕೃತ್ಯಗಳು ವ್ಯಾಪಕವಾಗಿವೆ, ಇವುಗಳನ್ನು ತಡೆಗಟ್ಟುವಲ್ಲಿ ರಾಜ್ಯದ ಹೋಂ ಮಿನಿಸ್ಟರ್ ಸಂಪೂರ್ಣ ವಿಫಲರಾಗಿದ್ದು ವೇಸ್ಟ್ ಮಿನಿಸ್ಟರ್ ಆಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ತಮ್ಮ ಸಂಸ್ಥೆಗಳಿಗೆ ಉತ್ತಮ ಆಡಳಿತಗಾರರಾಗಿರುವ ಜಿ. ಪರಮೇಶ್ವರ ಗೃಹ ಸಚಿವರಾಗಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ, ಈ ಎಲ್ಲ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳು ಎದುರಿಸುತ್ತಿದ್ದರೂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕೇವಲ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ, ಅವರ ಈ ನಡವಳಿಕೆಯಿಂದ ಜನತೆ ನರಕಯಾತನೆ ಅನುಭವಿಸುವಂತಾಗಿದೆ ಎಂದರು.
ರಾಜ್ಯದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ, ಈ ಬಗ್ಗೆ ಸಣ್ಣ ಬಾಲಕನೋರ್ವ ಪ್ರಧಾನಿಗೆ ಪತ್ರ ಬರೆಯುವಂತಾಗಿದೆ, ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುವುದಂತೂ ಸತ್ಯ, ರಾಜ್ಯದಲ್ಲಿ ಇನ್ನಷ್ಟು ಕಾನೂನು-ಸುವ್ಯವಸ್ಥೆ ಬಿಗಡಾಯಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು, ಕೇವಲ ಒಂದು ಸಮುದಾಯ ಖುಷಿ ಪಡಿಸಲು ಉಳಿದ ಸಮಾಜಗಳನ್ನು ತುಳಿಯುವ ಹಾಗೂ ಅವರನ್ನು ತೊಂದರೆಗೆ ತಳ್ಳುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.