ADVERTISEMENT

ವಿಜಯಪುರ | ಸಿದ್ದೇಶ್ವರ ಜಾತ್ರೆಗೆ ವೈಭವದ ಚಾಲನೆ

ಸಪ್ತ ನಂದಿಕೋಲು, ಗೋಮಾತೆಗೆ ಶಾಸಕ ಯತ್ನಾಳ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:11 IST
Last Updated 12 ಜನವರಿ 2026, 6:11 IST
ವಿಜಯಪುರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪವಿತ್ರ ಸಪ್ತ ನಂದಿಕೋಲುಗಳಿಗೆ ಪೂಜೆ ನೆರವೇರಿಸುವ ಮೂಲಕ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು
ವಿಜಯಪುರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪವಿತ್ರ ಸಪ್ತ ನಂದಿಕೋಲುಗಳಿಗೆ ಪೂಜೆ ನೆರವೇರಿಸುವ ಮೂಲಕ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು   

ವಿಜಯಪುರ: ಉತ್ತರ ಕರ್ನಾಟಕದ ಅಂದದ-ಚೆಂದದ ಶ್ರೀ ಸಿದ್ದೇಶ್ವರ ಜಾತ್ರೆಗೆ ಭಾನುವಾರ ವೈಭವದ ಚಾಲನೆ ದೊರಕಿದ್ದು, ಸಂಪ್ರದಾಯದಂತೆ ಸಾಲಂಕೃತ ಸಪ್ತ ನಂದಿಕೋಲುಗಳಿಗೆ ವಿಶೇಷ ಪೂಜೆ ಹಾಗೂ ಗೋಮಾತೆಗೆ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಿತು.

ನೂರಾರು ಭಕ್ತಾದಿಗಳು ನಂದಿಕೋಲುಗಳ ಪೂಜೆ ಸಂದರ್ಭದಲ್ಲಿ ಧರಿಸುವ ವಿಶೇಷ ಶುಭ್ರ ವರ್ಣದ ಉಡುಪು ಧರಿಸಿ ಪೂಜೆಯಲ್ಲಿ ಭಕ್ತಿ ಭಾವದಲ್ಲಿ ಭಾಗಿಯಾದರು.

ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಂದಿಕೋಲುಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

ADVERTISEMENT

ಹತ್ತಾರು ಯುವಕರು ಭಕ್ತಿಭಾವದಿಂದ ನಂದಿಕೋಲುಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ದೇವಾಲಯದಿಂದ ಆರಂಭಗೊಂಡ ಪವಿತ್ರ ಯಾತ್ರೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿ ಅಟಲ್ ಬಿಹಾರಿ ವಾಜಪೇಯಿ ರಸ್ತೆಯ ಚತುರ್ಮುಖ ಗಣಪತಿ ದೇವಾಲಯಕ್ಕೆ ತಲುಪಿತು. ಅಲ್ಲಿ ವಿಶೇಷ ಪೂಜೆ ನೇರವೇರಿತು. ಅಲ್ಲಿಂದ ಪುನಃ ಸಿದ್ಧೇಶ್ವರ ದೇವಸ್ಥಾನಕ್ಕೆ ತರಲಾಯಿತು.

ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಾತ್ರಾ ಸಮಿತಿಯ ಸದಸ್ಯರು ಹಾಗೂ ಭಕ್ತರು ಸೇರಿ ನಂದಿಕೋಲುಗಳಿಗೆ ಪೂಜೆ ಸಲ್ಲಿಸಿದರು. ಗೋಮಾತೆ ಪೂಜೆಯನ್ನು ಮುರುಗಯ್ಯ ಗಚ್ಚಿನಮಠ, ನಂದಿ ಕೋಲು ಪೂಜೆಯನ್ನು ಅರ್ಚಕರಾದ ಸಿದ್ದಯ್ಯ ಹಿರೇಮಠ, ನೀಲಕಂಠಯ್ಯ ಪೂಜಾರಿ, ಶಿವಾನಂದ ಹಿರೇಮಠ ನೆರವೇರಿಸಿದರು.

ದೇವಾಲಯದ ಆವರಣದಲ್ಲಿ ರಾತ್ರಿ ಬೈಲಾಟ, ನಾಟಕ, ಸಂಗೀತ, ಜಾನಪದ ಕಾರ್ಯಕ್ರಮಗಳು ಜರುಗಿದವು.

ಮೇಯರ್ ಎಂ.ಎಸ್.ಕರಡಿ, ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಜಾತ್ರಾ ಸಮಿತಿ ಅಧ್ಯಕ್ಷ ಗುರು ಗಚ್ಚಿನಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಶಿವಾನಂದ ನೀಲಾ, ಅಮೃತ ತೋಶನಿವಾಲ್, ಎಸ್.ಎಂ. ಪಾಟೀಲ, ರಾಜಶೇಖರ ಮಗಿಮಠ, ರಾಹುಲ ಜಾಧವ, ಪ್ರೇಮಾನಂದ ಬಿರಾದಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.