ADVERTISEMENT

ವಿದೇಶದಲ್ಲೂ ಸರಳತೆ ಮೆರೆದಿದ್ದ ಸಿದ್ಧೇಶ್ವರ ಶ್ರೀ

ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ ಸ್ಮರಣೆ

ಚಂದ್ರಶೇಖರ ಕೊಳೇಕರ
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
ಚೀನಾದ ಮಹಾಗೋಡೆ ವೀಕ್ಷಿಸುತ್ತಿರುವ ಸಿದ್ದೇಶ್ವರ ಶ್ರೀಗಳು, ಅವರೊಂದಿಗೆ ಸುತ್ತೂರು ಶ್ರೀ, ಆಲಮಟ್ಟಿ ಶ್ರೀ
ಚೀನಾದ ಮಹಾಗೋಡೆ ವೀಕ್ಷಿಸುತ್ತಿರುವ ಸಿದ್ದೇಶ್ವರ ಶ್ರೀಗಳು, ಅವರೊಂದಿಗೆ ಸುತ್ತೂರು ಶ್ರೀ, ಆಲಮಟ್ಟಿ ಶ್ರೀ   

ಆಲಮಟ್ಟಿ: ‘ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಸಿದ್ಧೇಶ್ವರ ಶ್ರೀಗಳು ಅಧ್ಯಾತ್ಮದ ಕಂಪು ಹರಡಿದ್ದರು. ಪ್ರವಚನ ಕಾರ್ಯಕ್ರಮದ ಅಂಗವಾಗಿ ಅಮೆರಿಕಕ್ಕೆ 10ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು’ ಎಂದು ಆಲಮಟ್ಟಿಯ ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ದೇವರು ಸ್ಮರಿಸಿದರು.

ಶ್ರೀಗಳ ಅಗಲಿಕೆಯ ವಿಷಯ ತಿಳಿದು ಅಮೆರಿಕದಿಂದ ಬಂದಿರುವ ರುದ್ರಮುನಿ ದೇವರು ‘ಪ್ರಜಾವಾಣಿ’ಯೊಂದಿಗೆ ಈ ವಿಷಯಗಳನ್ನು ಹಂಚಿಕೊಂಡರು.

‘2006ರಿಂದ ಶ್ರೀಗಳ ವಿದೇಶ ಪ್ರವಾಸದಲ್ಲಿ ನಾನು ಜೊತೆಗಿರುತ್ತಿದ್ದೆ. 20 ವರ್ಷಗಳಿಂದ ಶ್ರೀಗಳು ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ. ಡಿ.28ರಂದು ವಿಡಿಯೊ ಕರೆ ಮಾಡಿ ಮಾತನಾಡಿದ್ದೇ ಕೊನೆ’ ಎಂದು ಭಾವುಕರಾಗಿ ನುಡಿದರು.

ADVERTISEMENT

‘ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಗ್ರೀಸ್, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಲಂಡನ್, ನೆದರ್‌ಲ್ಯಾಂಡ್, ಯುಕೆ, ಟರ್ಕಿ, ದಕ್ಷಿಣ ಅಮೆರಿಕ, ಕೆನಡಾ, ಚೀನಾ, ಈಜಿಫ್ಟ್‌, ಬ್ರೆಜಿಲ್, ಪೆರು, ಅರ್ಜೈಂಟಿನಾ, ನಾರ್ವೆ ಸೇರಿದಂತೆ ವಿಶ್ವದ ನಾನಾ ದೇಶಗಳನ್ನು ಅವರೊಂದಿಗೆ ಸುತ್ತಾಡಿದ್ದೇನೆ. ಎಲ್ಲಿ ಹೋದರೂ ಇತಿಹಾಸ, ಪರಂಪರೆಯುಳ್ಳ ಸ್ಥಳಗಳು, ಪ್ರಕೃತಿ ಸೌಂದರ್ಯ ಹೆಚ್ಚಿರುವ ಜಾಗಗಳಿಗೆ ಹೋಗಲು ಆದ್ಯತೆ ನೀಡುತ್ತಿದ್ದರು. ವಿದೇಶದಲ್ಲಿದ್ದರೂ ತಮ್ಮ ಎಂದಿನ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ, ಅದೇ ಸರಳತೆಯಿಂದ ನಡೆದುಕೊಳ್ಳುತ್ತಿದ್ದರು’ ಎಂದು ನೆನಪಿಸಿಕೊಂಡರು.

ಕಾಡಿನಲ್ಲಿ ಕಳೆದುಹೋದ ಪ್ರಸಂಗ: 2006ರಲ್ಲಿ ಅಮೆರಿಕದ ಡೆಟ್ರಾಯ್ಟ್ ನಗರದಲ್ಲಿದ್ದಾಗ, ಬೆಳಿಗ್ಗೆ 5.30ಕ್ಕೆ ವಾಯುವಿಹಾರಕ್ಕೆ ತೆರಳಿದ್ದೆವು. ಪ್ರಕೃತಿ ಆರಾಧಿಸುತ್ತಾ 16 ಕಿ.ಮೀ ದೂರದಲ್ಲಿದ್ದ ಕಾಡು ಪ್ರವೇಶಿಸಿದ್ದೇ ಗೊತ್ತಾಗಲಿಲ್ಲ. ಆ ದಟ್ಟ ಕಾಡಿನಿಂದ ಹೊರಗೆ ಬರಲು ದಾರಿ ಕಾಣಲಿಲ್ಲ. ಮೊಬೈಲ್ ನೆಟ್‌ವರ್ಕ್ ಸಹ ಇರಲಿಲ್ಲ. ಶ್ರೀಗಳನ್ನು ಎಲ್ಲಿಯೂ ಹೋಗದಂತೆ ತಿಳಿಸಿ, ನಾನೇ ಸ್ವಲ್ಪ ಎತ್ತರದ ಮಟ್ಟಕ್ಕೆ ಹೋಗಿ, ನಮಗೆ ಆತಿಥ್ಯ ನೀಡಿದ್ದ ನಾಗಮನೋಹರ ಅವರಿಗೆ ಕರೆ ಮಾಡಿದಾಗಲೇ ನಾವು ಹೊರಬರಬೇಕಾಯಿತು’ ಎಂದು ಆಲಮಟ್ಟಿ ಶ್ರೀಗಳು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಯುರೋಪ್ ಪ್ರವಾಸದಲ್ಲಿದ್ದಾಗ, ಶ್ರೀಗಳ ಇಚ್ಛೆಯಂತೆ ಗ್ರೀಸ್ ದೇಶದಲ್ಲಿ ಸ್ಯಾಕ್ರೆಟಿಸ್‌ಗೆ ವಿಷ ನೀಡಿ ಕೊಂದ ಜೈಲನ್ನು ವೀಕ್ಷಿಸಿದ್ದೆವು. ದಕ್ಷಿಣ ಅಮೆರಿಕದ ಪೆರುವಿಗೆ ತೆರಳಿ ಭಾರತೀಯ ಪರಂಪರೆಯ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೆವು. ವಿದೇಶ ಪ್ರಯಾಣದ ಸಂಪೂರ್ಣ ಉಸ್ತುವಾರಿ ಸುತ್ತೂರು ಮಠದಿಂದಲೇ ನಡೆಯುತ್ತಿತ್ತು. ಸುತ್ತೂರು ಶ್ರೀಗಳು ಸಾಕಷ್ಟು ಬಾರಿ ನಮ್ಮ ಜೊತೆ ಬಂದಿದ್ದರು’ ಎಂದರು.

‘ನಾರ್ವೆಯ ನಾರ್ತ್‌ ಕ್ಯಾಂಪ್‌ನಲ್ಲಿ 24 ಗಂಟೆ ಹಗಲೇ ಇರುವುದರಿಂದ, ಅದನ್ನು ವೀಕ್ಷಿಸಲು ತೆರಳಿದ್ದೆವು. ಜಗತ್ತಿನ ಅತ್ಯಂತ ದೊಡ್ಡ ಜಲಪಾತ ಇಗ್ವಾಸು ಫಾಲ್ಸ್ ನೋಡಲು ಹೋದಾಗ ಶೀತ ಹೆಚ್ಚಿದ್ದರೂ, ಶ್ರೀಗಳು ಮಾತ್ರ ಶ್ವೇತವಸ್ತ್ರಧಾರಿಗಳಾಗಿದ್ದರು. ಸ್ವೆಟರ್ ಧರಿಸಲಿಲ್ಲ.ಚೀನಾದ ಮಹಾಗೋಡೆ ಹಾಗೂ ಊಟಿ ಬಳಿಯ ದೊಡ್ಡ ಬೆಟ್ಟ ಹತ್ತುವಾಗಲೂ ಅವರು ಆಯಾಸಪಡಲಿಲ್ಲ’ ಎಂದರು.

2019ರಲ್ಲಿ ಕೊನೆಯ ವಿದೇಶ ಪ್ರವಾಸ
‘2019ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದೇ ಸಿದ್ಧೇಶ್ವರ ಶ್ರೀಗಳ ಕೊನೆಯ ವಿದೇಶ ಪ್ರವಾಸವಾಯಿತು. ಅಲಾಸ್ಕಾದ ಜೀವಂತ ನೀರ್ಗಲ್ಲು ನೋಡಿ ಶ್ರೀಗಳು ಅಚ್ಚರಿ ಹಾಗೂ ಸಂತಸಪಟ್ಟಿದ್ದರು. ಕೋವಿಡ್ ಕಾರಣದಿಂದ ಎರಡು ವರ್ಷ ಎಲ್ಲಿಯೂ ಹೋಗಲಿಲ್ಲ. 2022ರಲ್ಲಿ ನಾವು ಮತ್ತೆ ಅಮೆರಿಕಕ್ಕೆ ಹೋಗಬೇಕಿತ್ತು. ಆದರೆ, ಅವರು ಅನಾರೋಗ್ಯದ ಕಾರಣ ಬರಲಿಲ್ಲ’ ಎಂದು ಆಲಮಟ್ಟಿ ಶ್ರೀ ತಿಳಿಸಿದರು.

ವಾಕಿಂಗ್ ಬಿಡಲಿಲ್ಲ: ವಿದೇಶದಲ್ಲಿ ಎಷ್ಟೇ ಮಳೆ, ಗಾಳಿ, ಮಂಜು ಬೀಳುತ್ತಿದ್ದರೂ ಶ್ರೀಗಳು ಮಾತ್ರ ಒಂದು ದಿನವೂ ವಾಕಿಂಗ್ ತಪ್ಪಿಸುತ್ತಿರಲಿಲ್ಲ. ಅಮೆರಿಕದಲ್ಲೊಮ್ಮೆ ಶೀತ ಗಾಳಿ ಬೀಸುತ್ತಿತ್ತು. ಆದರೂ, ವಾಕಿಂಗ್ ಮಾಡಲು ಹಠ ತೊಟ್ಟರು. ನಾನು ಬೇಡ ಅಂದಿದ್ದಕ್ಕೆ ಸಿಟ್ಟಾದರು. ಕೊನೆಗೆ ಕಾರಿನಲ್ಲಿ ಜೆಎಸ್‌ಎಸ್ ಸ್ಪಿರುಚುಯಲ್ ಹಾಲ್‌ಗೆ ತೆರಳಿ, ಅಲ್ಲಿ ವಾಕಿಂಗ್ ಮಾಡಿದೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.