ADVERTISEMENT

ಸಚಿವ ರಾಮಲಿಂಗರೆಡ್ಡಿ ಅನಾವರಣ ಏ.8 ರಂದು

ಸಿಂದಗಿ ಬಸ್ ನಿಲ್ದಾಣಕ್ಕೆ ಚೆನ್ನವೀರ ಸ್ವಾಮೀಜಿ ಹೆಸರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 14:41 IST
Last Updated 4 ಏಪ್ರಿಲ್ 2025, 14:41 IST
ಚೆನ್ನವೀರ ಸ್ವಾಮೀಜಿ
ಚೆನ್ನವೀರ ಸ್ವಾಮೀಜಿ   

ಸಿಂದಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಇಲ್ಲಿಯ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣ ನಾಮಕರಣ ಅನಾವರಣ ಕಾರ್ಯಕ್ರಮ ವಿದ್ಯುಕ್ತವಾಗಿ ಏಪ್ರಿಲ್ 8 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಮಫಲಕವನ್ನು ಅನಾವರಣಗೊಳಿಸುವರು. ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅತಿಥಿಗಳಾಗಿ ಉಪಸ್ಥಿತರಿರುವರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಭಾಗೀಯ ಸಾರಿಗೆ ಅಧಿಕಾರಿ ಎಂ.ಎಸ್.ಹಿರೇಮಠ ಹಾಜರಿರುವರು.

ADVERTISEMENT

ಸಾರಂಗಮಠದ ಎರಡು ಎಕರೆ ಜಮೀನನ್ನು 1952ರಲ್ಲಿ ಪಟ್ಟಣದ ಬಸ್ ನಿಲ್ದಾಣಕ್ಕೆ ನೀಡಿದ ಚೆನ್ನವೀರ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡುವಂತೆ ಅನೇಕ ವರ್ಷಗಳಿಂದ ಭಕ್ತರು, ಪಟ್ಟಣದ ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು.

ರಾಜ್ಯ ಸರ್ಕಾರ ಪೂಜ್ಯ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿ ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ 2025, ಮಾರ್ಚ್ 26 ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ಹೊರಡಿಸಿದ್ದರು. ಶಾಸಕ ಅಶೋಕ ಮನಗೂಳಿ ಅವರು ಬಸ್ ನಿಲ್ದಾಣಕ್ಕೆ ಶ್ರೀಗಳ ನಾಮಕರಣ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾದರು.

ಸದ್ಭಕರು, ಸಮಸ್ತ ತಾಲ್ಲೂಕಿನ ಜನತೆಯ ಸಂತೋಷ, ಮೆಚ್ಚುಗೆಗೆ ಶಾಸಕರ ಕಾರ್ಯ ಕಾರಣವಾಗಿದೆ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಭಿನಂದಿಸಿದ್ದಾರೆ.

2024 ನ.27 ರಂದು ಪಟ್ಟಣದ ಸಾರಂಗಮಠದ ಆವರಣದಲ್ಲಿ ಉಜ್ಜಯನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಸಾನಿಧ್ಯದಲ್ಲಿ ಜರುಗಿದ 'ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣ ನಾಮಕರಣ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಿತ್ತು. ಸಾರಂಗಮಠದ ಶ್ರೀಗಳು ಶಾಸಕರ ಕೈಗೆ ಚಿನ್ನದ ಕಡಗ ತೊಡಿಸಿ, ಅವರ ಕುಟುಂಬವನ್ನು ಸನ್ಮಾನಿಸಿ ಆಗ್ರಹ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.