ಸಿಂದಗಿ(ವಿಜಯಪುರ): ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ ಆಚರಣೆ ಮುಂದುವರಿಸಿಕೊಂಡು ಬರಲಾಗಿದೆ.
ಪೊಲೀಸ್ ಕಾನ್‌ಸ್ಟೆಬಲ್ ಮೌಲಾಲಿ ಆಲಗೂರ ನೇತೃತ್ವದಲ್ಲಿ ಮುಸ್ಲಿಂ ಕುಟುಂಬ ಬಸವಣ್ಣನವರ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮೌಲಾಲಿ ಆಲಗೂರ ಮಾತನಾಡಿ, ‘ಭಯೋತ್ಪಾದನೆಯಂಥ ಅಮಾನವೀಯ ಕುಕೃತ್ಯ ನಿರ್ಮೂಲನೆಗೆ ಬಸವ ತತ್ವ ಪ್ರಸಾರ ತುಂಬ ಮುಖ್ಯವಾಗಿದೆ. ದಯವೇ ಧರ್ಮದ ಮೂಲ ಈ ವಚನಗಳ ಸಾಲು ಅರ್ಥೈಸಿಕೊಂಡರೆ ಭಯೋತ್ಪಾದನೆ ಹೋಗಲಾಡಿಸಲು ಸಾಧ್ಯ’ ಎಂದು ತಿಳಿಸಿದರು.
‘ಶ್ರೇಷ್ಠ ಜೀವಿ ಎನಿಸಿಕೊಂಡ ಮನುಜ ಜಾತಿ, ಜಾತಿಗಳ ಹೆಸರಿನಲ್ಲಿ ಸಂಘರ್ಷದ ಹಾದಿ ತುಳಿಯುತ್ತಿರುವುದು ದುರಂತವೇ ಸರಿ. ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಸಹಿಷ್ಣುತೆ, ಭ್ರಾತೃತ್ವ ಸೇರಿದಂತೆ ಮಾನವೀಯ ಮೌಲ್ಯಗಳು ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಇದೇ ಸಂದರ್ಭದಲ್ಲಿ ಉಗ್ರರಿಂದ ಹತ್ಯೆಗೀಡಾದ 26 ಜನ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.
ಕಾನ್‌ಸ್ಟೆಬಲ್ ಮಷಾಕ್ ನಾಯ್ಕೋಡಿ ಮಾತನಾಡಿ, ‘ಇವನಾರವ, ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂಬ ಭಾವ ಗಟ್ಟಿಗೊಂಡಾಗಲೇ ಬಸವ ಕಂಡ ಭಾರತ ನಿರ್ಮಾಣ ಸಾಧ್ಯ. ಆಂತರಿಕ ಕಲಹ ಕೈ ಬಿಟ್ಟು ಕಾಯಕದಲ್ಲಿ ಕೈಲಾಸ ಕಾಣಲು ಶ್ರಮಿಸೋಣ’ ಎಂದು ಹೇಳಿದರು.
ಮುಕ್ತುಂ ಪಟೇಲ್ ಆಲಗೂರ, ಮಹಮ್ಮದ ಜುಬೇರ್, ಮೊಹಮ್ಮದ ಜಯಾನ್, ಸಾನಿಯಾ ಸೊನ್ನ, ಜುನೇರಾ, ಶಕೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.