ADVERTISEMENT

ಹಿಂದುಳಿದ ವರ್ಗಗದವರಿಗೆ ಕಾಂಗ್ರೆಸ್ ಟಿಕೆಟ್‌ಗೆ ಆಗ್ರಹ

ಸಿಂದಗಿ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 14:45 IST
Last Updated 20 ಮಾರ್ಚ್ 2021, 14:45 IST

ವಿಜಯಪುರ: ಸಿಂದಗಿ ವಿಧಾನಸಭಾ ಉಪ ಚುನಾವಣೆಯ ದಿನಾಂಕ ಘೋಷಣೆಯಾಗುವ ಮೊದಲೇ ಮೇಲ್ವರ್ಗದ ಅಶೋಕ ಮನಗೂಳಿ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಹಿಂದುಳಿದ ವರ್ಗಗಳಿಗೆ ಮಾಡಿದ ಘೋರ ಅನ್ಯಾಯ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬಗೌಡ ಎನ್. ಬಿರಾದಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ನಾಗಠಾಣ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ವಿಜಯಪುರ ನಗರ ಕ್ಷೇತ್ರ ಅಲ್ಪಸಂಖ್ಯಾತರಿಗೆ ಹಾಗೂ ಸಿಂದಗಿ ಕ್ಷೇತ್ರ ಹಿಂದುಳಿದ ವರ್ಗಕ್ಕೆ, ಉಳಿದ ಐದು ಕ್ಷೇತ್ರಗಳಿಗೆ ಸಾಮಾನ್ಯ ವರ್ಗಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡುತ್ತಾ ಬರಲಾಗಿದೆ. ಈಗ ಲಿಂಗಾಯತ ವರ್ಗಕ್ಕೆ ಆದ್ಯತೆ ನೀಡಿ ಹಿಂದುಳಿದ ವರ್ಗಗಳನ್ನು ಕಡೆಗಣಿಸಿರುವುದು ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಮಾರಕವಾಗಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಶೇ 55ರಷ್ಟು ಹಿಂದುಳಿದ ವರ್ಗದವರಿದ್ದು, ಒಂದು ಕ್ಷೇತ್ರದಲ್ಲಾದರೂ ಆದ್ಯತೆ ನೀಡದೆ ಹಿಂದುಳಿದ ವರ್ಗಗಳ ಹಕ್ಕು ಕಿತ್ತುಕೊಂಡಂತಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟಣೆ ಮಾಡುತ್ತಾ ಬಂದವರನ್ನು ಕಡೆಗಣಿಸಿ ನೇರವಾಗಿ ಪಕ್ಷಕ್ಕೆ ಬಂದವರನ್ನು ಅಭ್ಯರ್ಥಿಗಳನ್ನು ಮಾಡುತ್ತಾ ಹೋದರೆ ಪಕ್ಷ ಸಂಘಟನೆ ಕುಂಟಿತವಾಗುವುದಲ್ಲದೆ ಪಕ್ಷಕ್ಕಾಗಿ ದುಡಿದವರು ನಿರಾಸೆರಾಗುತ್ತಾರೆ ಎಂದು ತಿಳಿಸಿದ್ದಾರೆ.

ADVERTISEMENT

ಇನ್ನೂ ಚುನಾವಣೆ ದಿನಾಂಕ ಘೋಷಣೆ ಆಗದ ಕಾರಣ ಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರು ಎಚ್ಚತ್ತುಕೊಂಡು ಹಿಂದುಳಿದ ವರ್ಗದ ಅರ್ಹರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು. ಇಲ್ಲವಾದರೆ ಹಿಂದುಳಿದ ವರ್ಗಗಳ ಮತಗಳು ವಿಭಜನೆಯಾಗಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗುವದರಲ್ಲಿ ಸಂಶಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.