ADVERTISEMENT

ಸಿಂದಗಿ ಉಪಚುನಾವಣೆ; ಬೂಸನೂರು ವಿರುದ್ಧ ಬಿಜೆಪಿಯಲ್ಲಿ ಬಂಡಾಯ!

ಹೊಸಬರಿಗೆ ಅವಕಾಶಕ್ಕೆ ಮೊರೆ

ಬಸವರಾಜ ಸಂಪಳ್ಳಿ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಮತ್ತು ಎನ್‌.ರವಿಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸಿಂದಗಿ ಬಿಜೆಪಿ ಮುಖಂಡರು
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಮತ್ತು ಎನ್‌.ರವಿಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸಿಂದಗಿ ಬಿಜೆಪಿ ಮುಖಂಡರು   

ವಿಜಯಪುರ: ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಭಿನ್ನಮತ, ಗುಂಪುಗಾರಿಕೆ ಬುಗಿಲೆದ್ದಿದೆ.

ಸಿಂದಗಿ ಕ್ಷೇತ್ರದ ಮೂಲ ಬಿಜೆಪಿ ಮುಖಂಡರನ್ನು ಒಳಗೊಂಡ ಗುಂಪೊಂದು ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎನ್‌.ರವಿಕುಮಾರ್, ಜಿಲ್ಲಾ ಉಸ್ತುವಾರಿ‌ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ, ಮಾಜಿ ಶಾಸಕ ರಮೇಶ ಬೂಸನೂರು ವಿರುದ್ಧ ದೂರು ನೀಡಿದೆ.

‘ಬೂಸನೂರು ಅವರಿಗೆಈಗಾಗಲೇ ಮೂರು ಬಾರಿ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಮತ್ತೆ ಟಿಕೆಟ್‌ ನೀಡಬಾರದು, ಎರಡು ಬಾರಿ ಶಾಸಕರಾಗಿದ್ದಾಗ ಅವರು ಹಿಂದುತ್ವದ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದರು. ಈಗಲೂ ಪಕ್ಷ ಸಂಘಟನೆಗೆ ಶ್ರಮಿಸುತ್ತಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದು ಮುಖಂಡರು ದೂರಿದ್ದಾರೆ ಎನ್ನಲಾಗಿದೆ.

ADVERTISEMENT

‘ಕ್ಷೇತ್ರದಲ್ಲಿ 35 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರ ದೊಡ್ಡ ಪಡೆಯೇ ಇದ್ದು, ಅವರನ್ನು ಈಗ ಗಮನಿಸಬೇಕು.ಈ ಬಾರಿಯ ಚುನಾವಣೆಯಲ್ಲಿಬಿಜೆಪಿ ಮೂಲ ಕಾರ್ಯಕರ್ತರಿಗೆ ಅವಕಾಶ ನೀಡಬೇಕು, ಹೊಸಬರನ್ನು ಕಣಕ್ಕಿಳಿಸಬೇಕು ಎಂಬ ಬೇಡಿಕೆ ಇಡಲಾಗಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

‘ಸಿಂದಗಿ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆಪಾರ್ಟಿಯು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧರಾಗಿರುವುದಾಗಿ ಹೇಳಿ ಬಂದಿರುವುದಾಗಿಯೂ’ ಅವರು ತಿಳಿಸಿದರು.

ದೂರನ್ನು ಆಲಿಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಉಪಾಧ್ಯಕ್ಷರು,ರಾಜ್ಯ ಕೋರ್‌ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಟಿಕೆಟ್‌ಗೆ ಬೇಡಿಕೆ:ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಶಂಭು ಕಕ್ಕಳಮೇಲಿ, ರವೀಂದ್ರ ಲೋಣಿ, ಚಂದ್ರಶೇಖರ ನಾಗನೂರು, ಸಿದ್ದಣ್ಣ ಬಿರಾದಾರ, ಮುತ್ತು ಶಾಬಾದಿ, ಮಾಜಿ ಸೈನಿಕರಾದ ಶಿವಾನಂದ ಪಾಟೀಲ ಅವರಲ್ಲಿ ಯಾರಿಗೇ ಅವಕಾಶ ನೀಡಿದರೂ ಒಮ್ಮತದಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.