ADVERTISEMENT

ಉಪ ಚುನಾವಣೆಗೆ ಸಜ್ಜಾದ ಸಿಂದಗಿ: ಯಾರಾಗಲಿದ್ದಾರೆ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿ?

ರಾಜಕೀಯ ಚಟುವಟಿಕೆ ಬಿರುಸು; ಯಾರಾಗಲಿದ್ದಾರೆ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿ

ಬಸವರಾಜ ಸಂಪಳ್ಳಿ
Published 28 ಸೆಪ್ಟೆಂಬರ್ 2021, 13:45 IST
Last Updated 28 ಸೆಪ್ಟೆಂಬರ್ 2021, 13:45 IST
   

ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ಉಪ ಚುನಾವಣೆ ಘೋಷಣೆಯಾಗುತ್ತಿರುವಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ದಿಢೀರ್‌ ಬಿರುಸುಗೊಂಡಿವೆ.

ಜೆಡಿಎಸ್‌ ಹಿರಿಯ ಶಾಸಕರಾದಗಿದ್ದ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಈ ಮೊದಲೇ ಅಂದರೆ, ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ವೇಳೆಯೇ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಈ ನಿರೀಕ್ಷೆಯಲ್ಲೇ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳು ಚುನಾವಣೆಗೆ ಬಹುತೇಕ ತಯಾರಿ ನಡೆದಿದ್ದವು. ಆದರೆ, ಕೊನೇ ಗಳಿಗೆಯಲ್ಲಿ ಚುನಾವಣೆ ಘೋಷಣೆಯಾಗದೇ ಇರುವುದು ರಾಜಕೀಯ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತ್ತು. ಇದೀಗ ಪತ್ತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಅಶೋಕ ಕಾಂಗ್ರೆಸ್‌ ಅಭ್ಯರ್ಥಿ

ADVERTISEMENT

ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಬಳಿಕ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಘೋಷಣೆಯಾಗಿದೆ. ಆದರೆ, ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶರಣಪ್ಪ ಸುಣಗಾರ ಅವರು ಟಿಕೆಟ್‌ ಲಭಿಸದಿರುವುದಕ್ಕೆ ಅಸಮಾದಾನಗೊಂಡಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಬದಲಾವಣೆಗೆ ಒತ್ತಡ ಹೇರಿದ್ದರು. ಆದರೆ, ಅಭ್ಯರ್ಥಿ ಬದಲಾವಣೆ ವಿಷಯ ಅಲ್ಲಿಗೆ ನಿಂತಿದ್ದು, ಇದೀಗ ಮತ್ತೆ ಈ ವಿಷಯ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ಬಿಜೆಪಿ ಬಿ ಫಾರಂ ಯಾರಿಗೆ

ಬಿಜೆಪಿಯಿಂದ ಅಭ್ಯರ್ಥಿಯನ್ನಾಗಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಶಾಸಕ ರಮೇಶ ಭೂಸನೂರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಇನ್ನೂ ಅನೇಕರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದ್ದವು. ಇನ್ನೇನು ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಕು ಎನ್ನುವಷ್ಟರಲ್ಲೇ ಚುನಾವಣೆ ಮುಂದೂಡಲ್ಪಟ್ಟ ಕಾರಣ ಅಭ್ಯರ್ಥಿ ಹೆಸರು ಬಹಿರಂಗವಾಗಲಿಲ್ಲ. ಪ್ರಬಲ ಆಕಾಂಕ್ಷಯಾದ ರಮೇಶ ಭೂಸನೂರ ಅವರು ಈಗಾಗಲೇ ಬೆಂಗಳೂರಿನಲ್ಲಿ ಲಾಭಿ ನಡೆಸಿದ್ದಾರೆ.

ಕಣಕ್ಕಿಳಿಯುವುದೇ ಜೆಡಿಎಸ್‌

ಸಿಂದಗಿ ಕ್ಷೇತ್ರದಲ್ಲಿ ತನ್ನ ಅಸ್ವಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಜೆಡಿಎಸ್‌ ಚುನಾವಣಾ ಅಖಾಡಕ್ಕೆ ಇಳಿಯಲಿದೆಯೇ, ಇಲ್ಲವೇ ಎಂಬುದು ಇನ್ನೂ ಪಕ್ಷದ ವರಿಷ್ಠರು ತೀರ್ಮಾನಿಸಿಲ್ಲ.

ಎಚ್‌.ಡಿ.ದೇವೇಗೌಡರು ಉಪಚುನಾವಣಾ ಕಣಕ್ಕೆ ಜೆಡಿಎಸ್‌ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ ಆ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕು. ಈ ನಡುವೆ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಅವರು ಜೆಡಿಎಸ್‌ ಸೇರ್ಪಡೆಯಾಗಿದ್ದು, ಅವರೇ ಸಿಂದಗಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿದೆ. ಈ ನಡುವೆ ಎಂ.ಸಿ.ಮನಗೂಳಿ ಅವರ ಕಿರಿಯ ಪುತ್ರ ಡಾ.ಮುತ್ತು (ಚನ್ನವೀರ) ಮನಗೂಳಿ ಅವರ ಹೆಸರೂ ಜೆಡಿಎಸ್‌ ವಲಯದಲ್ಲಿ ಕೇಳಿಬರುತ್ತಿದ್ದು, ಯಾರನ್ನು ಪಕ್ಷ ಕಣಕ್ಕಿಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

****

ದಿಕ್ಸೂಚಿಯಾಗಲಿದೆಯೇ ಉಪ ಕದನ?

ವಿಜಯಪುರ: ರಾಜ್ಯ ವಿಧಾನಸಭೆಯ ಅವಧಿ ಮುಗಿಯುಲು ಕೇವಲ 18 ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಎದುರಾಗಿರುವ ಸಿಂದಗಿ ವಿಧಾನಸಭಾ ಉಪ ಚುನಾವಣೆ ಆಡಳಿತರೂಢ ಬಿಜೆಪಿ, ಪ್ರತಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜಕೀಯವಾಗಿ ಪ್ರತಿಷ್ಠೆಯಾಗಿದೆ.

ಸಿಂದಗಿ, ಹಾನಗಲ್‌ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಎದುರಾಗುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆಯಾಗಿರುವುದರಿಂದ ಸೋಲು, ಗೆಲುವು ಅವರ ವರ್ಚಸ್ಸಿನ ಅಳತೆಗೋಲಾಗುವ ಸಾಧ್ಯತೆ ಇದೆ.

ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರಿಗೆ ಈ ಚುನಾವಣೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.