ADVERTISEMENT

ಸಿಂದಗಿ ಉಪಚುನಾವಣೆ: ಮೇಲ್ನೊಟಕ್ಕೆ ತ್ರಿಕೋನ ಸ್ಪರ್ಧೆ

ಬಿಜೆಪಿ ಉಸ್ತುವಾರಿ ಪ್ರಮುಖ ಲಕ್ಷ್ಮಣ ಸವದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 12:19 IST
Last Updated 12 ಅಕ್ಟೋಬರ್ 2021, 12:19 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಸಿಂದಗಿ(ವಿಜಯಪುರ): ಉಪಚುನಾವಣೆಯಲ್ಲಿ ಮೇಲ್ನೊಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದರೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಏರ್ಪಡಲಿದ ಎಂದು ಉಪಚುನಾವಣೆ ಬಿಜೆಪಿ ಉಸ್ತುವಾರಿ ಪ್ರಮುಖ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿಯ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಹಳ್ಳಿ, ಹಳ್ಳಿಗಳಲ್ಲಿ ಒಂದು ಸುತ್ತು ಸಂಚರಿಸಿ ಮತದಾರರ ನಾಡಿ ಮಿಡಿತ ಅರಿತುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಹಳ ದೊಡ್ಡ ಅಂತರದಿಂದ ಗೆಲ್ಲುವ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಈಗಾಗಲೇ ಚುನಾವಣಾ 10 ಮಹಾಶಕ್ತಿ ಕೇಂದ್ರಗಳನ್ನು ರಚನೆ ಮಾಡಿ ಗೆಲುವಿನತ್ತ ಸಾಗಲು ಚುನಾವಣಾ ಕಾರ್ಯ ವೈಖರಿ ರೂಪಿಸಲಾಗಿದೆ. ಈ ಕೇಂದ್ರದ ಪ್ರಮುಖರು 28 ರ ವರೆಗೂ ಮತದಾರರ ಮನಸ್ಸು ಪರಿವರ್ತನೆಯಲ್ಲಿ ತೊಡಗಿಕೊಳ್ಳುವರು ಎಂದು ಹೇಳಿದರು.

ADVERTISEMENT

ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಏಳು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಉಸ್ತುವಾರಿಯನ್ನು ಸಚಿವರಾದ ವಿ.ಸೋಮಣ್ಣ, ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಇವರಿಗೆ ಒಂದೊಂದು ಕ್ಷೇತ್ರದ ಜವಾಬ್ದಾರಿ ಹೊಂದಿರುತ್ತಾರೆ. ಅದರಂತೆ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ ಎರಡು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದರು.

ನನ್ನೊಂದಿಗೆ ಶಾಸಕ ಪಿ.ರಾಜೀವ್‌ ಮೇಲ್ವಸ್ತುವಾರಿ ಕಾರ್ಯ ನಿರ್ವಹಿಸುವರು. ಬಸವಕಲ್ಯಾಣ ಉಪಚುನಾವಣೆಯಲ್ಲಿ ಗೆಲ್ಲಲು ಅನುಸರಿಸಿದ ಕಾರ್ಯ ವೈಖರಿಗಿಂತ ಭಿನ್ನ ಕಾರ್ಯಗಳನ್ನು ಇಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಎರಡು ದಿನಗಳ ಕಾಲ ಮತಕ್ಷೇತ್ರದಲ್ಲಿ ಸಂಚರಿಸುವರು. ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಇವರೂ ಕೂಡ ಪಾಲ್ಗೊಳ್ಳುವರು ಎಂದರು.

ಮತಕ್ಷೇತ್ರದಲ್ಲಿ ನೆನಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಉಸ್ತವಾರಿಗಳ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಪರಿಹಾರ ಒದಗಿಸಿಕೊಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಬಿಜೆಪಿಗೆ ಮತ ನೀಡಿ ಮತಕ್ಷೇತ್ರದ ಅಭಿವೃದ್ದಿಗೆ ಕೈಜೋಡಿಸುವಂತೆ ವಿನಂತಿಸಿಕೊಂಡರು.

ನಮ್ಮ ಗುರಿ ಈಗಿನ ಎರಡು ಉಪಚುನಾವಣೆ ಮಾತ್ರವಾಗಿರದೇ ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯೂ ಒಳಗೊಂಡಿದೆ. ಇದೇ ದಿಸೆಯಲ್ಲಿ ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.

ಶಾಸಕರಾದ ಪಿ.ರಾಜೀವ, ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಅಭ್ಯರ್ಥಿ ರಮೇಶ ಭೂಸನೂರ, ಬಿಜೆಪಿ ಪ್ರಮುಖರಾದ ಚಂದ್ರಶೇಖರ ಕವಟಗಿ, ಶ್ರೀಕಾಂತ ಕುಲಕರ್ಣಿ, ಅಶೋಕ ಅಲ್ಲಾಪೂರ, ರಾಜಶೇಖರ ಪೂಜಾರಿ, ಮಲ್ಲಿಕಾರ್ಜುನ ಜೋಗೂರ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.