ಸಿಂದಗಿ: ಪಟ್ಟಣದಲ್ಲಿ ಸ.ನಂ 842/2*2 ರಲ್ಲಿ ಹಲವಾರು ವರ್ಷಗಳಿಂದ ಪುರಸಭೆ ಹಕ್ಕುಪತ್ರ ಪಡೆದುಕೊಂಡು ವಾಸಮಾಡುತ್ತಿದ್ದ 84 ಕುಟುಂಬಗಳ ಮನೆ ಮತ್ತು ಶೆಡ್‌ಗಳನ್ನು ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪುರಸಭೆ, ತಾಲ್ಲೂಕು ಆಡಳಿತ ತೆರುವುಗೊಳಿಸಲಾಗಿದೆ.
ಅಲ್ಲಿರುವ ನಿವಾಸಿಗಳು ಈಗ ಬೀದಿ ಪಾಲಾಗಿದ್ದಾರೆ. ವಯೋವೃದ್ಧರು, ಚಿಕ್ಕಮಕ್ಕಳಾದಿಯಾಗಿ 84 ಕುಟುಂಬಗಳು ಕಳೆದ 10 ದಿನಗಳಿಂದ ಮಳೆಯಲ್ಲಿಯೂ ಬಯಲಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕುಳಿತುಕೊಂಡು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಪುರಸಭೆ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕರಾದ ಅಶೋಕ ಮನಗೂಳಿ, ಸಮಿತಿ ಸದಸ್ಯರು, ಇಂಡಿ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಒಳಗೊಂಡು ಸಭೆ ನಡೆಸಿ ಪುರಸಭೆಯ ಅಂತರಗಂಗಿ ಜಮೀನಿನಲ್ಲಿ 84 ಕುಟುಂಬಗಳಿಗೆ ನಿವೇಶನ ನೀಡುವ ನಿರ್ಣಯ ಮಾಡಿದ್ದಾರೆ. ಆದರೆ ನಿರಾಶ್ರಿತರು ಅದನ್ನು ತಿರಸ್ಕರಿಸಿದ್ದಾರೆ.
ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹಾಗೂ ಮುಖ್ಯಾಧಿಕಾರಿ ರಾಜಶೇಖರ ಎಸ್. ಧರಣಿನಿರತ ಸ್ಥಳಕ್ಕೆ ಬಂದು ಅಂತರಗಂಗಿ ಜಮೀನಿನಲ್ಲಿ ತಮಗೆ ಹಕ್ಕುಪತ್ರ ನೀಡಲಾಗುವುದು ಧರಣಿ ಅಂತ್ಯಗೊಳಿಸುವಂತೆ ಮಾಡಿದ ಮನವೊಲಿಕೆ ವಿಫಲವಾಗಿದೆ.
'ನಮ್ಮ ಆಸ್ತಿ ನಮ್ಮ ಹಕ್ಕು' ಎಂಬ ಘೋಷಣೆಯಡಿ ನಾವು ಇಷ್ಟು ವರ್ಷಗಳಿಂದ ವಾಸಿಸುತ್ತಿದ್ದ ನಿವೇಶನಗಳೇ ನಮಗೆ ಬೇಕು ಎಂಬ ಒಕ್ಕೋರಲಿನ ಪಟ್ಟು ಹಿಡಿದಿದ್ದಾರೆ.
ಅಂತರಗಂಗಿ ಜಮೀನು ಸಿಂದಗಿ ಪಟ್ಟಣದಿಂದ 6-7 ಕಿ.ಮಿ ದೂರದಲ್ಲಿದೆ. ಅಲ್ಲಿ 15 ಜನ ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಎನ್.ಎ ಆಗಿರುವ ಪ್ರದೇಶವಾಗಿದ್ದರೂ ನಂಬರಗಳುಳ್ಳ ಪ್ಲಾಟ್ ಕಲ್ಲುಗಳನ್ನು ಬಿಟ್ಟರೆ ಅದೊಂದು ಜಂಗಲ್‌ದಂತಿದೆ. ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆಯಂತೂ ದೂರದ ಮಾತು. ಇಂಥ ದುರ್ಗಮ, ನಿರ್ಜನ ಪ್ರದೇಶದಲ್ಲಿ ಜನವಸತಿ ಸಾಧ್ಯವೇ ಎಂಬುದು ನಿರಾಶ್ರಿತರ ಅಭಿಪ್ರಾಯವಾಗಿದೆ.
ಕೋರ್ಟ್ ಆದೇಶದನ್ವಯ 842/2*2 ರಲ್ಲಿನ 2 ಎಕರೆ 10 ಗುಂಟೆ ಗಳಲ್ಲಿನ ಮನೆಗಳನ್ನು ತೆರವುಗೊಳಿಸಿದ್ದಾಗಿದೆ. ಈಗ ಅದೇ ಜಾಗೆಯಲ್ಲಿ ಅದೇ ನಿವಾಸಿಗಳ ವಾಸಕ್ಕಾಗಿ ನಿವೇಶನ ಪಡೆಯುವ ಹಿನ್ನೆಲೆಯಲ್ಲಿ ಜಾಗದ ಮಾಲೀಕನೊಂದಿಗೆ ಖಾಸಗಿ ವ್ಯಕ್ತಿಯೊಬ್ಬರು ಸಂಧಾನ ನಡೆಸಿದ್ದಾರೆ. ಒಂದು ಮನೆಗೆ ಇಷ್ಟು ಅಂತ ಹಣ ನಿಗದಿಪಡಿಸಿದ್ದಾರೆ ಎಂದು ಪುರಸಭೆ ಸದಸ್ಯರೊಬ್ಬರಿಂದ ತಿಳಿದು ಬಂದಿದೆ.
ಈಗಾಗಲೇ ಶಾಸಕ ಅಶೋಕ ಮನಗೂಳಿ ಅವರು ನಿರಾಶ್ರಿತರ ನಿವೇಶನಕ್ಕಾಗಿ ಜಮೀನು ಖರೀದಿಸಿರೆ ಒಂದು ಎಕರೆ ಜಮೀನಿಗೆ ಆಗುವ ₹25ರಿಂದ ₹30 ಲಕ್ಷ ಎಂ.ಸಿ.ಮನಗೂಳಿ ಫೌಂಡೇಶನ್‌ದಿಂದ ನೀಡುವುದಾಗಿ ಬಹಿರಂಗವಾಗಿ ವಾಗ್ದಾನ ಮಾಡಿದ್ದಾರೆ. ಅವರ ಸಹಾಯ, ದಾನಿಗಳ ಸಹಾಯ, ನಿವಾಸಿಗಳು ಪುರಸಭೆ ಸದಸ್ಯರಲ್ಲೊಬ್ಬರಲ್ಲಿ ಸಂಗ್ರಹಿಸಿದ ಹಣದೊಂದಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ ಎಂದು ಸಂಧಾನದ ರೂವಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪುರಸಭೆಯ ಅಂತರಗಂಗಿ ಜಮೀನಿನಲ್ಲಿ 411 ಪ್ಲಾಟ್‌ಗಳಿವೆ. ಇದರಲ್ಲಿ ಕಳೆದ ವರ್ಷ 178 ಜನರಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಈಗ 84 ಕುಟುಂಬಗಳಿಗೆ ಇದೇ ಜಮೀನಿನಲ್ಲಿ ನಿವೇಶನ ನೀಡುವ ಬಗ್ಗೆ ಶಾಸಕರ ನೇತೃತ್ವದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆರಾಜಶೇಖರ ಎಸ್. ಪುರಸಭೆ ಮುಖ್ಯಾಧಿಕಾರಿ
23 ವರ್ಷಗಳಿಂದ ವಾಸ ಮಾಡಿದ 842/2*2 ರಲ್ಲಿಯೇ ನಮ್ಮ ನಿವೇಶನ ನಮಗೆ ಕೊಡಬೇಕು. ಮೂಲಸೌಲಭ್ಯ ಇಲ್ಲದ ದೂರದ ಪುರಸಭೆಯ ಅಂತರಗಂಗಿ ಜಾಗ ಬೇಡಫಾತೀಮಾ ಆಳಂದ ಧರಣಿನಿರತ ನಿವಾಸಿ
ಸತ್ತರೆ ಅಂತ್ಯಕ್ರಿಯೆ ಮಾಡುವುದು ಎಲ್ಲಿ?
ಸಿಂದಗಿಯಿಂದ ದೂರದಲ್ಲಿರುವ ನಿರ್ಜನ ಪ್ರದೇಶ ಪುರಸಭೆಯ ಅಂತರಗಂಗಿ ಜಮೀನಿನಲ್ಲಿ 84 ಕುಟುಂಬಗಳಿಗೆ ನಿವೇಶನ ನೀಡಿದರೆ ಅಲ್ಲಿ ವಿದ್ಯುತ್ ಸಂಪರ್ಕ ಇಲ್ಲ ನೀರು ಇಲ್ಲ ರಸ್ತೆ ಇಲ್ಲ ಯಾವೊಂದು ಮೂಲ ಸೌಲಭ್ಯವಿಲ್ಲ. ವಾಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ವಾಸ ಮಾಡುವುದು ಹೇಗೆ ? ಅಲ್ಲದೇ ಅಲ್ಲಿ ವಾಸ ಮಾಡುವ ನಿವಾಸಿಗಳಲ್ಲಿ ಯಾರಾದರೂ ಸತ್ತರೆ ಅಂತ್ಯಕ್ರಿಯೆ ಮಾಡಲು ಶವ ಸಿಂದಗಿಗೆ ತರಬೇಕಾ ಹೇಗೆ? ಎಂದು 842/2*2 ನಿವೇಶನದ ನಿವಾಸಿ ಶಕೀಲ್ ಶೇಖ್ 'ಪ್ರಜಾವಾಣಿ' ಎದುರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.