ADVERTISEMENT

ರೋಗಗ್ರಸ್ಥ ಸಿಂದಗಿ ಕೈಗಾರಿಕೆ ವಸಾಹತು

ಇಲ್ಲಗಳ ಪಟ್ಟಿಯೇ ದೊಡ್ಡದು, ಹೆಚ್ಚುವರಿ 50 ನಿವೇಶನಗಳಿಗೆ ಮಂಜೂರಾತಿಯ ನಿರೀಕ್ಷೆ

ಶಾಂತೂ ಹಿರೇಮಠ
Published 7 ನವೆಂಬರ್ 2019, 20:15 IST
Last Updated 7 ನವೆಂಬರ್ 2019, 20:15 IST
ಸಿಂದಗಿಯ ಕೈಗಾರಿಕೆ ವಸಾಹತು ಪ್ರದೇಶದ ನೀಲನಕ್ಷೆ
ಸಿಂದಗಿಯ ಕೈಗಾರಿಕೆ ವಸಾಹತು ಪ್ರದೇಶದ ನೀಲನಕ್ಷೆ   

ಸಿಂದಗಿ: ಸಮಾನ ಮನಸ್ಕರು ಸೇರಿಕೊಂಡು ತಮ್ಮಣ್ಣ ಈಳಗೇರ ನೇತೃತ್ವದಲ್ಲಿ 2004–05ರಲ್ಲಿ ಸಣ್ಣ ಕೈಗಾರಿಕೆಗಳ ಸಂಘವನ್ನು ಸ್ಥಾಪಿಸಿ ಪ್ರಾರಂಭಿಸಲಾಗಿದ್ದ ಕೈಗಾರಿಕಾ ವಸಾಹತು ಪ್ರದೇಶವು ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ವಿದ್ಯಾನಗರದ 4ನೇ ಕ್ರಾಸ್‌ನಿಂದ ಬ್ಯಾಕೋಡ ಮಧ್ಯದ 28 ಎಕರೆ ಜಮೀನನ್ನು ಗುರುತಿಸಲಾಗಿತ್ತು. ಅಷ್ಟೇ ಅಲ್ಲ, ಜಮೀನು ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಆಗಿರಲಿಲ್ಲ. 2005ರಲ್ಲಿ ಅಂದಿನ ಶಾಸಕ ಅಶೋಕ ಶಾಬಾದಿ ಅವರು ಕೈಗಾರಿಕಾ ವಸಾಹತು ಪ್ರದೇಶವನ್ನು ಮಂಜೂರು ಮಾಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದರು. ಅಂತೆಯೇ, ಅಂದಿನ ತಹಶೀಲ್ದಾರ್ ಶಿವಾನಂದ ಭಜಂತ್ರಿ ಕೂಡ ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದರು. ಇದರ ಪರಿ ಣಾಮ 28 ಎಕರೆ 27 ಗುಂಟೆ ಜಮೀನು ಸರ್ಕಾರದಿಂದ ಮಂಜೂರಾಯಿತು.

‘ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಡಿ ಮೊದಲ ಹಂತದಲ್ಲಿ 100 ನಿವೇಶನಗಳು ಹಂಚಿಕೆಯಾಗಿ ಫಲಾನುಭವಿಗಳಿಗೆ ವಿತ ರಣೆಯೂ ಆದವು. ಇನ್ನೂ ಹೆಚ್ಚು ವರಿಯಾಗಿ 50 ನಿವೇಶನಗಳಿಗೆ ಮಂಜೂರಾತಿ ಸಿಗಬೇಕಿದೆ’ ಎನ್ನುತ್ತಾರೆ ತಮ್ಮಣ್ಣ.

ADVERTISEMENT

‘ನಿವೇಶನ ಮಂಜೂರಾದ ಆರು ವರ್ಷದೊಳಗೆ ಫಲಾನುಭವಿಗಳು ಕೈಗಾರಿಕೆಗಳನ್ನು ಪ್ರಾರಂಭಿಸಬೇಕು ಎಂಬ ನಿಯಮಾವಳಿ ಇದೆ. ಸದ್ಯ 5–6 ತಿಂಗಳು ಮಾತ್ರ ಬಾಕಿ ಉಳಿದಿವೆ. ನಿವೇಶನ ಪಡೆದವರು ಉದ್ದಿಮೆ ಪ್ರಾರಂಭಿಸದಿದ್ದರೆ ನಿಯಮಾವಳಿ ಪ್ರಕಾರ ಅಭಿವೃದ್ಧಿ ನಿಗಮ ನಿವೇಶನ ಮುಟ್ಟುಗೋಲು ಹಾಕಿಕೊಂಡು ಯೋಗ್ಯ ಫಲಾನುಭವಗಳಿಗೆ ಹಂಚಿಕೆ ಆಗಬೇಕು ಎಂಬುದು ಕೈಗಾರಿಕೆ ವಸಾಹತು ಪ್ರದೇಶದಲ್ಲಿರುವ ಬಹುತೇಕ ಉದ್ದಿಮೆದಾರರ ಅನಿಸಿಕೆಯಾಗಿದೆ. ಕೆಲವರು ತಮ್ಮ ನಿವೇಶನಗಳನ್ನು ತಾವು ಬಳಕೆ ಮಾಡಿಕೊಳ್ಳದೇ ಬೇರೆ ಉದ್ದೇಶಕ್ಕಾಗಿ ಬಾಡಿಗೆ ಕೊಟ್ಟಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ಷೇಪಗಳು ಕೇಳಿ ಬರುತ್ತಿವೆ. ಬೇಕಾದವರಿಗೆ ನಿವೇಶನ ಸಿಕ್ಕಿಲ್ಲ. ಕೈಗಾರಿಕೆ ವಲಯದಲ್ಲದವರಿಗೆ ಸಿಕ್ಕಿವೆ’ ಎಂದು ಸಂಘದ ಪ್ರಮುಖ ಮಹಿ ಬೂಬ ಹಸರಗುಂಡಗಿ ಹೇಳುತ್ತಾರೆ.

‘ಶೇ 30ರಷ್ಟು ಉದ್ದಿಮೆದಾರರು ಪ್ರಾರಂಭಿಸಿದ ಕೈಗಾರಿಕೆಗಳು ಯಶಸ್ವಿಯಾಗಿ ಸಾಗಿವೆ. ಆದರೆ, ಕೈಗಾರಿಕೆ ಮೂಲ ಸೌಲಭ್ಯಗಳ ಕೊರತೆಯೂ ಸಾಕಷ್ಟಿದೆ. ಪ್ರಮುಖವಾಗಿ ವಾಹನಗಳ ಸಂಚಾರಕ್ಕಾಗಿ ಸಂಪರ್ಕ ರಸ್ತೆ ಇಲ್ಲ. ಕೈಗಾರಿಕಾ ವಸಾಹತು ಪ್ರದೇಶದಿಂದ 300 ಮೀ. ಸಮೀಪ ರಾಷ್ಟ್ರೀಯ ಹೆದ್ದಾರಿ ಬೈ ಪಾಸ್ ರಸ್ತೆ ಇದ್ದು, ಇದಕ್ಕೆ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ’ ಎಂದು ದುಂಡಪ್ಪ ಪರಸಪ್ಪಗೋಳ ಹೇಳುತ್ತಾರೆ.

‘ಕೈಗಾರಿಕೆ ವಸಾಹತು ನಿರ್ಮಾಣಕ್ಕೆ ಕಾರಣೀಭೂತರಾದ ಮರ್ತೂಜ ಬಳಗಾನೂರ, ಪ್ರಭು ಇಟಗಟ್ಟಿ, ಸುರೇಶ ಪೂಜಾರಿ, ಯುನೂಶ್ ಶಹಾಪುರ, ಭಾಷಾಸಾಬ ಪಟೇಲ, ದಸ್ತಗೀರ ಪರಾಸ, ಹಣಮಂತ ಚಿಂಚೊಳಿ, ರಾಜಾ ಮದರಖಾನ, ನಬಿಲಾಲ ಹಿಪ್ಪರಗಿ, ಚಂದ್ರೂ ಕಾಟಮಗಿರಿ ಇವರೆಲ್ಲರ ಶ್ರಮ, ಹೋರಾಟ ಯಾವತ್ತೂ ಮರೆಯಲಾಗದು’ ಎಂದು ತಮ್ಮಣ್ಣ ಈಳಗೇರ ಸ್ಮರಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.