ಸಿಂದಗಿ: ‘ಪಟ್ಟಣದಲ್ಲಿ ಎಲ್ಲಿ ಜಮೀನು ವಿವಾದ ಇದೆಯೋ ಅಲ್ಲೆಲ್ಲಾ ಮನಗೂಳಿ ಮನೆತನದ ಕೈವಾಡ ಇದೆ’ ಎಂದು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಎಂ.ಸಿ.ಮನಗೂಳಿ ವಿರುದ್ಧ ಗಂಭೀರ ಆರೋಪ ಮಾಡಿದರು..
‘ಪಟ್ಟಣದ ಸೋಮಪುರ ರಸ್ತೆಯ ಸ.ನಂ 842 ಜಮೀನಿನಲ್ಲಿ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿಯವರಿಗೆ ಸಂಬಂಧಿಸಿದ 4 ಎಕರೆ ಜಮೀನು ಇದ್ದದ್ದು. ಈ ಹಿಂದೆ ಗೊಲ್ಲರ ಸಮುದಾಯದವರನ್ನು ಒಕ್ಕಲೆಬ್ಬಿಸಿ ಜಾಗೆಯನ್ನು ತಮ್ಮದನ್ನಾಗಿ ಮಾಡಿಕೊಂಡಿರುವುದು. ರೈತರಿಗಾಗಿರುವ ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿವೇಶನ ಪಡೆದು ಅಲ್ಲಿ ರಾಜಕೀಯ ಪಕ್ಷದ ಕಚೇರಿ ಮಾಡಿರುವುದು, ಲ್ಲಿಯ ವಿರಕ್ತಮಠದ ಬಳಿ ಶಿಕ್ಷಣ ಸಂಸ್ಥೆಗೆ ದಾನವಾಗಿ ನೀಡಿದ ಜಾಗವನ್ನು ಮಾರಾಟ ಮಾಡಲಾಗಿರುವ ಇವೆಲ್ಲ ಸಂಗತಿಗಳು ಜಗಜ್ಜಾಹಿರವಾಗಿವೆ’ ಎಂದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸ.ನಂ 842/2 ರಲ್ಲಿ 20 ವರ್ಷಗಳಿಂದ ವಾಸ ಮಾಡುತ್ತಿದ್ದ 84 ಕುಟುಂಬಗಳು ಬೀದಿಪಾಲು ಆಗಲು ಪುರಸಭೆ ನೇರ ಹೊಣೆ. ಹೀಗಾಗಿ ಪುರಸಭೆ ವಿರುದ್ಧ ನಿರಾಶ್ರಿತರ ಪರವಾಗಿ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಲಾಗುವುದು. ಈ ಕುರಿತು ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ 84 ಕುಟುಂಬಗಳಿಗೆ ಹಕ್ಕುಪತ್ರ ನಾನು ಹಂಚಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಖಂಡನೀಯ. ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಈಗ ಅವರನ್ನು ಒಕ್ಕಲೆಬ್ಬಿಸಿರುವುದು ಕೂಡ ಕಾಂಗ್ರೆಸ್ ಸರ್ಕಾರ’ ಎಂದು ಟೀಕಿಸಿದರು.
‘84 ಕುಟುಂಗಳಿಗೆ ಸೂರು ಇಲ್ಲದೇ ನಿರಾಶ್ರಿತರಾಗಿದ್ದಾಗ ಜನಪ್ರತಿನಿಧಿಯಾದವರು ಅವರ ಪರವಾಗಿ ನಿಂತುಕೊಳ್ಳಬೇಕು’ ಎಂದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಂತರಗಂಗಿ ಬಳಿ 10 ಎಕರೆ ಜಮೀನು ಮತ್ತೆ 13 ಎಕರೆ ಜಮೀನು ಆಶ್ರಯ ವಸತಿ ಯೋಜನೆಯಡಿ ಖರೀದಿಸಲಾಗಿತ್ತು. ನಿರಾಶ್ರಿತರಿಗೆ ಅಲ್ಲಿ ನಿವೇಶನ ಹಂಚಿಕೆಯಾಗಬೇಕು. ಅದನ್ನು ಬಿಟ್ಟು ಜನಸಂಖ್ಯೆ ಆಧಾರದ ಮೇಲೆ ಬೇರೆ ಜಿಲ್ಲೆಗಳಲ್ಲಿ ಮೇಲ್ದರ್ಜೆಗೇರಿಸಿದಂತೆ ಸಿಂದಗಿ ಪುರಸಭೆಯನ್ನು ಕೂಡ ನಗರಸಭೆಯನ್ನಾಗಿ ಮಾಡಲಾಗಿದೆ. ಈ ಕೆಲಸಕ್ಕೆ ಶಾಸಕ ಅಶೋಕ ಮನಗೂಳಿ ವೈಭವ, ಡಂಭಾಚಾರದ ಮೆರವಣಿಗೆ ಮಾಡಿಸಿಕೊಳ್ಳುವುದು ಬೇಕಿತ್ತಾ. ಬಡವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಬೇಕಿತ್ತು’ ಎಂದು ಕುಟುಕಿದರು.
ಸಿಂದಗಿ ಪಟ್ಟಣದ ನಿರಾಶ್ರಿತರ ನೋವಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸ್ಪಂದಿಸದೇ ಇರುವುದು ಖಂಡನಾರ್ಹ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಟೀಕಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬಿಜೆಪಿ ಜಿಲ್ಲಾ ಪ್ರಮುಖರಾದ ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗೂರ, ಸಿಂದಗಿ ಬಿಜೆಪಿ ಪ್ರಮುಖರಾದ ಬಿ.ಎಚ್.ಬಿರಾದಾರ, ಗುರು ತಳವಾರ, ಸಿದ್ರಾಮ ಆನಗೊಂಡ, ಶಿದ್ಲಿಂಗಯ್ಯ ಹಿರೇಮಠ ಇದ್ದರು.
ಸಿಂದಗಿ ಶಾಸಕ ತುಘಲಕ ಆಡಳಿತ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಅತಿಕ್ರಮಣ ತೆರುವು ಕಾರ್ಯಾಚರಣೆಯಲ್ಲಿ ತಮ್ಮ ಸಂಸ್ಥೆಯ ಆಸ್ತಿಗಳನ್ನು ಉಳಿಸಿಕೊಂಡಿದ್ದಾರೆರಮೇಶ ಭೂಸನೂರ ಮಾಜಿ ಶಾಸಕ
ಶೆಡ್ ನಿರ್ಮಿಸಿ ಕೊಡಿ
‘ಆಶ್ರಯ ಕಳೆದುಕೊಂಡ ಕುಟುಂಬಗಳು ಡಾ.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿವೆ. ತಕ್ಷಣವೇ ಸ.ನಂ 24 ರಲ್ಲಿನ ಪುರಸಭೆ ಜಮೀನಿನಲ್ಲಿ 84 ಕುಟುಂಬಗಳು ವಾಸಿಸಲು ಶೆಡ್ ನಿರ್ಮಿಸಿಕೊಡಬೇಕು’ ಎಂದು ಶಾಸಕ ರಮೇಶ ಭೂಸನೂರ ಆಗ್ರಹಿಸಿದರು. ‘ನನ್ನ ಶಾಸಕ ಅವಧಿಯಲ್ಲಿ ತಾಲ್ಲೂಕು ಕ್ರೀಡಾಂಗಣದ ಜಾಗದಲ್ಲಿ ವಾಸವಾಗಿದ್ದ 136 ಜನರಿಗೆ ಸ್ಥಳಾಂತರಿಸಿ ಹುಡ್ಕೋ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.