ಸಿಂದಗಿ: ‘20 ವರ್ಷಗಳಿಂದ ವಾಸವಿದ್ದ ಮನೆಯ ಜೊತೆಗೆ ನಮಗೆ ಭಾವನಾತ್ಮಕ ಸಂಬಂಧವೂ ಇತ್ತು. ಈಗ ಇದ್ದಕ್ಕಿದ್ದಂತೆ ಆ ಮನೆಗಳನ್ನು ನೆಲಸಮ ಮಾಡಿದ್ದು, ನಮ್ಮ ಬದುಕು ಬಯಲಲ್ಲೆ ಅತಂತ್ರವಾಗಿದೆ. ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಎರಡು ದಿನಗಳಿಂದ ಹಗಲು-ರಾತ್ರಿ ಕಾಲ ಕಳೆಯುತ್ತಿದ್ದೇವೆ’ ಎಂದು ಮಹಿಳೆಯರು ಕಣ್ಣೀರು ಹಾಕಿದರು.
ಪಟ್ಟಣದ ಸೋಮಪುರ ರಸ್ತೆಯಲ್ಲಿನ ಸ.ನಂ 842/2X2 ರಲ್ಲಿನ 2 ಎಕರೆ 10 ಗುಂಟೆ ಜಾಗದಲ್ಲಿ ವಾಸವಿದ್ದ 80 ಮನೆಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿಯ ನಿವಾಸಿಗಳು ಮಂಗಳವಾರ ಅಳಲು ತೋಡಿಕೊಂಡರು.
ಪುರಸಭೆಯಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಸಾಲ ಮಾಡಿ ಪುಟ್ಟ ಮನೆ ಕಟ್ಟಿಕೊಂಡಿದ್ದೇವು. ಈಗ ನಮ್ಮ ಮನೆಗಳು ಪುರಸಭೆ ಕಾರ್ಯಾಚರಣೆಯಿಂದ ನೆಲಸಮಗೊಂಡಿವೆ. ಇರಲು ಮನೆಯಿಲ್ಲದ ಕಾರಣ ಈಗ ರಸ್ತೆಯಲ್ಲಿ ಕುಳಿತುಕೊಂಡಿದ್ದೇವೆ. ಪುರಸಭೆ ತಕ್ಷಣವೇ ಸೂರಿನ ವ್ಯವಸ್ಥೆ ಮಾಡಬೇಕು’ ಎಂದು ಯನುಮಾಬಾಯಿ ಬಂಕಲಗಿ ಕಣ್ಣೀರು ಹಾಕಿದರು.
‘ಹಗಲು– ರಾತ್ರಿ ಎನ್ನದೇ ಮಹಿಳೆಯರು ಧರಣಿ ನಡೆಸಿದ್ದಾರೆ. ಧರಣಿಗಾಗಿ ಹಾಕಿದ ಟೆಂಟ್‌ನ್ನು ಪೊಲೀಸರು ಕಿತ್ತು ಹಾಕಿದ್ದಾರೆ’ ಎಂದು ದಲಿತ ಸಂಘಟನೆ ಪ್ರಮುಖರು ‘ಪ್ರಜಾವಾಣಿ’ಗೆ ತಿಳಿಸಿದರು.
ಫಾತಿಮಾ ಆಳಂದ, ಜಯಶ್ರೀ ಇರಕಲ್, ಕಮಲಾಬಾಯಿ ಜಮಾದಾರ, ರೇಣುಕಾ ಕಲಾಲ, ಶಾಂತಾಬಾಯಿ ಗಾಣಿಗೇರ, ಪಾರ್ವತಿ ಜಮಾದಾರ, ಮಾನಬಾಯಿ ರಾಠೋಡ, ಶಹನಾಜ ಗುಂದಗಿ, ಕಮಲವ್ವ ಯಾಳವಾರ, ಜ್ಯೋತಿ ಚವ್ಹಾಣ, ಕಮಲಾಬಾಯಿ ಚವ್ಹಾಣ ಧರಣಿಯಲ್ಲಿ ಕುಳಿತುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.