ADVERTISEMENT

ಸಿಂದಗಿ ಪುರಸಭೆ: 80 ಕುಟುಂಬಗಳ ಮನೆಗಳ ತೆರವು

ಸಿಂದಗಿ ಪುರಸಭೆಯಿಂದ ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:36 IST
Last Updated 9 ಸೆಪ್ಟೆಂಬರ್ 2025, 6:36 IST
ಸಿಂದಗಿ ಪಟ್ಟಣದ ಸೋಮಪುರ ರಸ್ತೆಯಲ್ಲಿನ ಸ.ನಂ 842/2*2 ರಲ್ಲಿ ವಾಸಿಸುತ್ತ 80 ಕುಟುಂಬಗಳ ಮನೆಗಳನ್ನು ತೆರುವು ಕಾರ್ಯಾಚರಣೆಯನ್ನು ಪುರಸಭೆ ಕಾರ್ಯಾಲಯದಿಂದ ಸೋಮವಾರ ಪ್ರಾರಂಭಗೊಂಡಿತು.
ಸಿಂದಗಿ ಪಟ್ಟಣದ ಸೋಮಪುರ ರಸ್ತೆಯಲ್ಲಿನ ಸ.ನಂ 842/2*2 ರಲ್ಲಿ ವಾಸಿಸುತ್ತ 80 ಕುಟುಂಬಗಳ ಮನೆಗಳನ್ನು ತೆರುವು ಕಾರ್ಯಾಚರಣೆಯನ್ನು ಪುರಸಭೆ ಕಾರ್ಯಾಲಯದಿಂದ ಸೋಮವಾರ ಪ್ರಾರಂಭಗೊಂಡಿತು.   

ಸಿಂದಗಿ: ಪಟ್ಟಣದ ಸೋಮಪುರ ರಸ್ತೆಯಲ್ಲಿನ ಸ.ನಂ 842/2*2 ರಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುವ 80 ಕುಟುಂಬಗಳ ಮನೆಗಳನ್ನು ತೆರವುಗೊಳಿಸಲು ಬೆಳ್ಳಂ ಬೆಳಿಗ್ಗೆ ಜೆಸಿಬಿ ಯಂತ್ರಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಗಾಬರಿಗೊಂಡ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಮನೆಗಳಲ್ಲಿನ ಸಾಮಾನುಗಳನ್ನು ರಸ್ತೆಗೆ ತಂದಿಟ್ಟರು.

ಈ ಸಂದರ್ಭದಲ್ಲಿ ಮಹಿಳೆಯರು ಜೋರಾಗಿ ಅಳುವುದು, ಬೊಬ್ಬೆ ಹಾಕುವುದು,  ಅತ್ತು, ಅತ್ತು ಕೆಲವರು ಮೂರ್ಛೆ ಹೋಗುವುದು ಸಾಮಾನ್ಯವಾಗಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಮಹಿಳೆಯರು ಹಿಡಿಶಾಪ ಹಾಕಿದರು.

ಇತ್ತೀಚೆಗಷ್ಟೆ ಸಾಲ ಮಾಡಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಲಾಗಿತ್ತು. ಈಗ ಮನೆ ಬಿಟ್ಟು ಹೋಗುವುದು ತುಂಬಾ ದು:ಖ ತರಿಸಿದೆ ಎಂದು ನಿವಾಸಿ ಅಜೀಮ್ ಶೇಖ್ ಮನೆ ಸಾಮಾನುಗಳನ್ನು ಹೊರ ತಂದಿಡುತ್ತಾ ಜನಪ್ರತಿನಿಧಿಗಳು ಮತ್ತು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬೀದಿಗೆ ಬಿದ್ದ ಈ ಕುಟುಂಬಗಳಿಗೆ ಶಾಸಕರು ಆಸರೆಯಾಗಿ ನಿಲ್ಲಬೇಕು. ಅವರಿಗೆ ಸರ್ಕಾರದಿಂದ ಮತ್ತು ಪುರಸಭೆಯಿಂದ ವಾಸಿಸಲು ಸೂರಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು  ಆಗ್ರಹಿಸಿದರು.

ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ತೆರುವು:

ಸ.ನಂ 842/2*2 ರ 2 ಎಕರೆ 10 ಗುಂಟೆ ಜಮೀನು ಮಾಲೀಕರಾದ ಮರಿಯಂಬಿ ಕರ್ಜಗಿ ಅವರ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಮತ್ತು ಪುರಸಭೆ ಕಾರ್ಯಾಲಯವು ಪೊಲೀಸರ್ ಭದ್ರತೆಯಲ್ಲಿ 14 ಪಕ್ಕಾ ಮನೆಗಳು, 20 ಕಚ್ಚಾ ಮನೆಗಳು, 41 ಶೆಡ್ ಗಳನ್ನು ತೆರುವು ಕಾರ್ಯಾಚರಣೆ ಕೈಗೊಂಡಿತು ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರು ಪ್ರಜಾಸೌಧ ಆವರಣದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವಾಸಿಗಳಿಗೆ ಪುನರ್ವಸತಿ ಕೇಂದ್ರಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಾಗಿ ಸ್ಥಳಗಳನ್ನು ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ಆಶ್ರಯ ವಸತಿ ಯೋಜನೆಯಡಿ ಅಂತರಗಂಗಿ ಜಮೀನಿನಲ್ಲಿ ನಿವೇಶನ ನೀಡುವ ಬಗ್ಗೆ ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ನಿರ್ಣಯ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಎಸ್ ತಿಳಿಸಿದರು.

30 ಮಹಿಳಾ ಪೊಲೀಸರು, 80 ಕಾನ್‌ಸ್ಟೇಬಲ್, 6  ಪಿ.ಎಸ್.ಐ, ಇಬ್ಬರು ಸಿ.ಪಿ.ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ನಾನಾಗೌಡ ಪೊಲೀಸ್ ಪಾಟೀಲ ಸುದ್ದಿಗಾರರಿಗೆ ಹೇಳಿದರು. ಪುರಸಭೆ ಕಾನೂನು ಸಲಹೆಗಾರ ಬಿ.ಜಿ.ನೆಲ್ಲಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.