ADVERTISEMENT

ಸಿಂದಗಿ ಪಟ್ಟಣದ ಪುರಸಭೆ ಮೇಲ್ದರ್ಜೆಗೆ: ಜ.26ರಂದು ನಗರಸಭೆ ಕಾರ್ಯಾಲಯ ಉದ್ಘಾಟನೆ

ಶಾಂತೂ ಹಿರೇಮಠ
Published 23 ಜನವರಿ 2026, 2:19 IST
Last Updated 23 ಜನವರಿ 2026, 2:19 IST
<div class="paragraphs"><p>ಸಿಂದಗಿ ನಗರಸಭೆ ಕಾರ್ಯಾಲಯಕ್ಕೆೆ ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ</p></div>

ಸಿಂದಗಿ ನಗರಸಭೆ ಕಾರ್ಯಾಲಯಕ್ಕೆೆ ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ

   

ಸಿಂದಗಿ: ಪಟ್ಟಣದ ಪುರಸಭೆ 53 ವರ್ಷಗಳ ನಂತರ ನಗರಸಭೆಯಾಗಿ ಮೇಲ್ದರ್ಜೆಗೇರುವ ಅವಕಾಶ ದೊರಕಿದೆ. ಆಡಳಿತಾತ್ಮಕ ದೃಷ್ಟಿಯಿಂದ ಸಿಂದಗಿ ಪಟ್ಟಣವನ್ನು ಸಣ್ಣನಗರ ಪ್ರದೇಶ ಎಂದು ಸರ್ಕಾರ ಘೋಷಿಸಿ, 2025 ನ. 3ರಂದು ಸರ್ಕಾರದ ರಾಜ್ಯಪತ್ರದಲ್ಲಿ ನಗರಸಭೆಯನ್ನಾಗಿ ಪದನಾಮೀಕರಿಸಿದೆ.

ಸಿಂದಗಿ 24.71 ಚದರ ಕಿ.ಮೀ ಒಟ್ಟು ಪ್ರದೇಶ, 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಉದ್ದೇಶದಿಂದ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ.

ADVERTISEMENT

ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಬಗ್ಗೆ ಪಟ್ಟಣದಲ್ಲಿ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಿವೆ. ಪಟ್ಟಣದ ನಾಗರಿಕರು ಪುರಸಭೆ ಕಾರ್ಯಾಲಯಕ್ಕೆ ಹೋಗಲೂ ಹಿಂದೇಟು ಹಾಕುತ್ತಾರೆ. ಹೋದರೆ ತಮ್ಮ ಕೆಲಸ ಆಗುವುದಿಲ್ಲ, ಯಾರೊಬ್ಬರೂ ಸ್ಪಂದಿಸುವುದೂ ಇಲ್ಲ ಎಂಬ ದೂರು ಬಹುತೇಕ ಜನರಿಂದ ಕೇಳಿ ಬರುತ್ತಿದೆ.

ನಗರಸಭೆಯಾಗಿ ಮೇಲ್ದರ್ಜೆಗೇರಿರುವುದು ಅಭಿವೃದ್ಧಿಗೆ ಪೂರಕವಾಗುತ್ತದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತದೆ. ಇದರಿಂದಾಗಿ ತೀರಾ ಹಿಂದುಳಿದ ಪಟ್ಟಣದ ಅಭಿವೃದ್ಧಿಯ ವೇಗ ಹೆಚ್ಚಬಹುದೇನೊ ಎಂಬುದು ಕೆಲವು ನಾಗರಿಕರ ಆಶಯವಾಗಿದೆ.

ಈಗಿರುವ 23 ವಾರ್ಡ್‌ಗಳು 31 ವಾರ್ಡುಗಳಾಗಿ ವಿಸ್ತಾರಗೊಳ್ಳುತ್ತವೆ. ಸದಸ್ಯರ ಸಂಖ್ಯೆ ಹೆಚ್ಚಾದಂತೆ ಅಭಿವೃದ್ಧಿಗಾಗಿ ಒತ್ತಡ ಹೆಚ್ಚಬಹುದೇನೊ? ಆದಾಗ್ಯೂ ಎಲ್ಲ ವಾರ್ಡ್‌ಗಳ ಸದಸ್ಯರಾಗಿ ಆಯ್ಕೆಯಾಗುವವರು ಅಭಿವೃದ್ಧಿಯ ಹೆಸರಿನಲ್ಲಿ ನಗರಸಭೆ ಪ್ರವೇಶ ಮಾಡಬೇಕಾದುದು ಅಗತ್ಯವಾಗಿದೆ ಎಂದು ಜನತೆಯ ಒತ್ತಾಸೆ.

‘ನಗರಸಭೆಯಾಗಿ ಮೇಲ್ದರ್ಜೆಗೇರುವುದು ನಾಗರಿಕರಿಗೆಲ್ಲ ಖುಷಿಯ ವಿಚಾರ. ಆದರೆ ದೂಳಿಗೆ ಹೆಸರಾದ ನಮ್ಮೂರಿನ ಪರಿಸ್ಥಿತಿ ಸುಧಾರಿಸಬೇಕಿದೆ. ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿಯತ್ತ ಚಿತ್ತ ಹರಿಸಿದರೆ ನಗರಸಭೆ ಅಂತ ಕರೆಸಿಕೊಳ್ಳಲು ಯೋಗ್ಯವಾಗುತ್ತದೆ. ನಗರಸಭೆ ಎಂಬ ಹೆಸರಿನ ಮಾತಿಗಿಂತ ಕೆಲಸ ಮಾತಾಗಬೇಕು. ನಗರದ ದುಃಸ್ಥಿತಿ ಬಗ್ಗೆ ಆಡಿಕೊಳ್ಳುವುದು ತಪ್ಪುವಂತಾಗಬೇಕು. ಆಗ ನಗರಸಭೆ ಎನ್ನಲು ಹೆಮ್ಮೆ ಎನಿಸುತ್ತದೆ’ ಎಂದು ಗೃಹಿಣಿ ಸುಕೃತ ಅಮರೀಶ ದೇಸಾಯಿ (ಪಟ್ಟಣಶೆಟ್ಟಿ) ಅಭಿಪ್ರಾಯಪಟ್ಟರು.

ಹಳೆಯ ಪುರಸಭೆ ಕಾರ್ಯಾಲಯಕ್ಕೆ ನಗರಸಭೆ ಕಾರ್ಯಾಲಯ ಎಂಬ ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ. ಸುಣ್ಣ-ಬಣ್ಣ ಹಚ್ಚಲಾಗುತ್ತಿದೆ. ಉದ್ಘಾಟನಾ ಕಾರ್ಯದ ಸಿದ್ಧತೆ ಭರದಿಂದ ಸಾಗಿದೆ.

ಆಡಳಿತ ಸಂಪೂರ್ಣ ಸುಧಾರಣೆಯಾಗಲಿ: ನಗರಸಭೆಯಾಗಿ ಮೇಲ್ದರ್ಜೆಗೇರಿದೆ ಎಂದು ಹೆಮ್ಮೆಪಟ್ಟರೆ ಸಾಲದು. ಕಾರ್ಯಾಲಯದ ಹದಗೆಟ್ಟ ಆಡಳಿತ ಸಂಪೂರ್ಣ ಸುಧಾರಣೆಯಾಗಬೇಕು. ಇಲ್ಲಿ ದುಡಿಯುವ ಶ್ರಮಿಕ ವರ್ಗ ಹೊರಗುತ್ತಿಗೆ ಕಾರ್ಮಿಕರು ಸಂಬಳವಿಲ್ಲದೇ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಿದ್ದಾಗ ನಗರಸಭೆ ಯಾವ ಪುರುಷಾರ್ಥಕ್ಕಾಗಿ? ಇನ್ನಾದರೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿಗೆ ಒತ್ತು ಕೊಡಬೇಕು
ಶಾಂತವೀರ ಬಿರಾದಾರ ಸಿಂದಗಿ ಪುರಸಭೆ ಮಾಜಿ ಅಧ್ಯಕ್ಷ
ಅನುದಾನ ಸೂಕ್ತ ಬಳಕೆ ಅಗತ್ಯ: ಪುರಸಭೆ ನಗರಸಭೆಯಾಗಿ ಕಾಗದ ಮತ್ತು ನಾಮಫಲಕದಲ್ಲಿ ಮಾತ್ರ ಮೇಲ್ದರ್ಜೆಗೇರಿದರೆ ಏನೂ ಪ್ರಯೋಜನವಿಲ್ಲ. ಸರ್ಕಾರದ ಅನುದಾನ ಸಿಂದಗಿ ಸ್ವಚ್ಛ ನಗರವಾಗಲು ಅಭಿವೃದ್ಧಿಗೊಳ್ಳುವ ನಗರವಾಗಲು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು
ಸಂತೋಷ ಪಾಟೀಲ ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ
ಹೊಸ ಬಾಟಲಿಯಲ್ಲಿ ಹಳೆಯ ಪಾನೀಯ: ಹೊಸ ಬಾಟಲಿಯಲ್ಲಿ ಹಳೆಯ ಪಾನೀಯ ಇದ್ದಂತಾಗಿದೆ ಸಿಂದಗಿ ಪುರಸಭೆ ನಗರಸಭೆಯಾದ ಪರಿಸ್ಥಿತಿ. ಇಡೀ ರಾಜ್ಯದಲ್ಲಿಯೇ ಹಗರಣಗಳ ಸರಮಾಲೆಗೆ ಹೆಸರು ಮಾಡಿದ ಏಕಮೇವ ಪುರಸಭೆ ಎಂದರೆ ಇದೇ ಆಗಿದೆ. ನಗರಸಭೆ ಕಾರ್ಯಾಲಯದಲ್ಲಿ ಹಳೆಯ ಆಡಳಿತವೇ ಮುಂದುವರಿದರೆ ಅಭಿವೃದ್ಧಿಗೆ ಅವಕಾಶವೇ ಇರಲ್ಲ.
ಪ್ರಕಾಶ ಹಿರೇಕುರುಬರ ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಸಿಂದಗಿ
ಹೆಚ್ಚಿನ ಅನುದಾನ ಲಭ್ಯ: ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕುತ್ತದೆ. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚುತ್ತದೆ. ನಗರದ ಸ್ವಚ್ಛತೆಗೆ ಅಗತ್ಯವಾಗಿರುವ ವಾಹನಗಳು ದ್ವಿಗುಣಗೊಳ್ಳುತ್ತವೆ. ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ಮುಂಬರುವ ದಿನಗಳಲ್ಲಿ ನಗರಸಭೆ ಸದಸ್ಯರ ಸಹಕಾರದಿಂದ ಅನುದಾನದ ಸದ್ಬಳಕೆಯೊಂದಿಗೆ ಮಾದರಿ ನಗರವನ್ನಾಗಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ
ಸುರೇಶ ಪೂಜಾರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.