ಸಿಂದಗಿ: ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ತುಂಬಾ ದಿನಗಳಿಂದ ಮುಖ್ಯಾಧಿಕಾರಿ ಇಲ್ಲದೇ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಸಾರ್ವಜನಿಕರು ಅಗತ್ಯ ಕಾರ್ಯಗಳಿಗಾಗಿ ಕಾರ್ಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೂರ್ಣಾವಧಿ ಮುಖ್ಯಾಧಿಕಾರಿಯಾಗಿದ್ದ ಎಸ್.ರಾಜಶೇಖರ ಅವರು ದೀರ್ಘಾವಧಿ ವೈದ್ಯಕೀಯ ರಜೆ ಹಾಕಿದ್ದರಿಂದ ಆಲಮೇಲ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ ನಾಯಕ ಅವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಅವರು ಪುರಸಭೆ ಕಾರ್ಯಾಲಯದ ಸಮೀಪ ಸುಳಿಯುತ್ತಿಲ್ಲ. ಆದರೆ, ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಯಂತಿ ಆಚರಣೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ ಎಂದು ಮಾತು ಕೇಳಿ ಬಂದಿದೆ.
‘ಆಲಮೇಲ ಪಟ್ಟಣ ಪಂಚಾಯ್ತಿಯಲ್ಲಿ ಅತಿಕ್ರಮಣ ತೆರುವು ಸೇರಿದಂತೆ ಹೆಚ್ಚುವರಿ ಕೆಲಸಗಳಿದ್ದು, ಕಾರ್ಯದ ಒತ್ತಡದಿಂದ ನನಗೆ ಸಿಂದಗಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ಕಾರಣ ನಿಯೋಜನೆಗೊಂಡ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಹುದ್ದೆ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ’ ಸುರೇಶ ನಾಯಕ ಅವರು ಮೇಲಧಿಕಾರಿ ಯೋಜನಾ ನಿರ್ದೇಶಕರಿಗೆ ಮನವಿ ಮಾಡಿಕೊಂಡಿರುವ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಆಸ್ತಿಗಳ ಉತಾರ ಪಡೆಯಲು ನಿತ್ಯ ಪುರಸಭೆ ಕಾರ್ಯಾಲಯಕ್ಕೆ ಅಲೆದಾಡಿ, ಅಲೆದಾಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೇಸಿಗೆಯ ಸಂದರ್ಭ ತುರ್ತಾಗಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ, ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ ದುರಸ್ತಿ ಮಾಡಬೇಕಾದರೆ ಬಿಲ್ ತೆಗೆಯುವುದು ಹಾಗೂ ನೀರು ಸರಬರಾಜು ಸಿಬ್ಬಂದಿ ಎರಡು ತಿಂಗಳ ವೇತನದ ಸಿಟಿಸಿ ನೀಡಬೇಕಾಗಿದ್ದು. ಹೀಗೆ ಅಗತ್ಯ ಕಾರ್ಯಗಳು ಸ್ಥಗಿತಗೊಂಡಿವೆ. ಮುಖ್ಯಾಧಿಕಾರಿ ಹುದ್ದೆಯಲ್ಲಿ ಯಾರೂ ಇಲ್ಲದ ಕಾರಣ ಇಂಥ ತೊಂದರೆಯಾಗುತ್ತಿವೆ ಎಂಬ ಮಾತು ಕಾರ್ಯಾಲಯದಿಂದ ಕೇಳಿ ಬಂದಿದೆ.
ಈ ಕುರಿತು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಕೂಡ ಮುಖ್ಯಾಧಿಕಾರಿ ಹುದ್ದೆ ನಿಯೋಜನೆ ಕುರಿತು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಆಲಮೇಲ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಸಿಂದಗಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು. ಇನ್ನೊಬ್ಬರಿಗೆ ನಿಯೋಜನೆ ಮಾಡಲಾಗುವುದು.
-ಬಿ.ಎ.ಸೌದಾಗರ ಯೋಜನಾ ನಿರ್ದೇಶಕ ಜಿಲ್ಲಾ ನಗರಾಭಿವೃದ್ಧಿಕೋಶ ವಿಜಯಪುರ
ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆ ಮಾಡುವಂತೆ ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕರಿಗೆ ಸಾಕಷ್ಟು ಬಾರಿ ಕೇಳಿಕೊಂಡರೂ ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ಪುರಸಭೆ ಆಡಳಿತ ಯಂತ್ರ ಸ್ಥಗಿತಗೊಂಡಿದೆ.
-ಶಾಂತವೀರ ಬಿರಾದಾರ ಅಧ್ಯಕ್ಷ ಪುರಸಭೆ
ತುರ್ತಾಗಿ ನಿವೇಶನದ ಉತಾರ ಅಗತ್ಯವಾಗಿದ್ದು ಈ ಕುರಿತು ಪುರಸಭೆ ಕಾರ್ಯಾಲಯಕ್ಕೆ ಅಲೆದಾಡಿ ಸಾಕಾಗಿ ಹೋಗಿದೆ. ಮುಖ್ಯಾಧಿಕಾರಿ ಲಾಗಿನ್ ಕೀ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ.
-ವಿಜಯಕುಮಾರ ಲೋಣಿ 2ನೆಯ ವಾರ್ಡ್ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.