ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಬಳಿ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆಯಲ್ಲಿನ ಸೇತುವೆ ಒಡೆದು ರಸ್ತೆಯಲ್ಲಿಯೇ ಹರಿಯುತ್ತಿರುವ ಕೊಳಚೆ ನೀರು
ಸಿಂದಗಿ: ಪಟ್ಟಣದ ಪುರಸಭೆ ಕಾರ್ಯಾಲಯದ ಬಳಿ ನೀರು ಹರಿಯಲು ಇರುವ ಸೇತುವೆ ಒಡೆದು ಹಾಕಿದ್ದರಿಂದ ಸ್ವಾಮಿ ವಿವೇಕಾನಂದ ವೃತ್ತದಿಂದ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತದ ವರೆಗೆ 19 ದಿನಗಳಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಮೇ 20 ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಈ ಸೇತುವೆಯಲ್ಲಿ ನೀರು ತುಂಬಿಕೊಂಡು ಹತ್ತಿರದ ಮನೆಗಳಲ್ಲಿ, ಪುರಸಭೆ ಕಾರ್ಯಾಲಯದ ಮುಖ್ಯದ್ವಾರದಲ್ಲಿ ನೀರು ನುಗ್ಗಿದ್ದರಿಂದ ಸೇತುವೆಯನ್ನೇ ಏಕಾಏಕಿಯಾಗಿ ಒಡೆದು ಹಾಕಲಾಗಿತ್ತು. ಹೀಗಾಗಿ ಅಂದಿನಿಂದ ಇಂದಿನವರೆಗೆ ಈ ಮುಖ್ಯರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಟಿಪ್ಪುಸುಲ್ತಾನ ವೃತ್ತದಿಂದ ಪುರಸಭೆ ಕಾರ್ಯಾಲಯಕ್ಕೆ ರಸ್ತೆ ಸಂಚಾರ ನಿಲ್ಲುತ್ತದೆ. ಹೀಗಾಗಿ ಸಾರ್ವಜನಿಕರು ತಿರುಗಾಟ, ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. ಮುಂದೆ ಹೋಗಲು ಮತ್ತೆ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ 2 ರಂದು ಪುರಸಭೆ ಸಭಾಭವನದಲ್ಲಿ ಜರುಗಿದ ತುರ್ತು ಸಾಮಾನ್ಯಸಭೆಯಲ್ಲಿ ಪುರಸಭೆ ಸದಸ್ಯ ಹಣಮಂತ ಸುಣಗಾರ ‘ಪುರಸಭೆ ಬಳಿ ಇರುವ ಸೇತುವೆ ಒಡೆದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಕೂಡಲೇ ಸಂಚಾರ ಸುಗಮಗೊಳ್ಳುವಂತೆ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ್ದರು.
‘ತುರ್ತಾಗಿ ಸೇತುವೆ ನಿರ್ಮಾಣಕ್ಕಾಗಿ ₹30 ಲಕ್ಷ ಅಗತ್ಯತೆ ಇದೆ. ಆದರೆ, ಪುರಸಭೆ ಕಾರ್ಯಾಲಯದಲ್ಲಿ ಅನುದಾನದ ಕೊರತೆ ಇದೆ. ಹೀಗಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪಿಡಬ್ಲ್ಯುಡಿ ಯವರು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪ್ರತಿಕ್ರಿಯಿಸಿದ್ದರು.
‘ಸೇತುವೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬಾರದ ಕಾರಣ ಈ ಕಾಮಗಾರಿಗೆ ಸಂಬಂಧಿಸಿದಂತೆ ಮತಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಕಾಮಗಾರಿ ಕುರಿತು ಅಂದಾಜು ಪತ್ರಿಕೆ ಸಿದ್ಧಪಡಿಸಿ ನೀಡಲಾಗಿದೆ’ ಎಂದು ಇಲಾಖೆ ಎಇಇ ಅರುಣ 'ಪ್ರಜಾವಾಣಿ' ಗೆ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದ ವೃತ್ತದಿಂದ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಟಿಪ್ಪುಸುಲ್ತಾನ ವೃತ್ತದವರೆಗೆ ರಸ್ತೆ, ಚರಂಡಿ ಮತ್ತು ಪುರಸಭೆ ಕಾರ್ಯಾಲಯದ ಬಳಿ ಇರುವ ಸೇತುವೆ ನಿರ್ಮಾಣಕ್ಕಾಗಿ ₹ 2.50 ಕೋಟಿ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ ಎಂದು ಸಿಂದಗಿ ಉಪವಿಭಾಗದ ಪಿಡಬ್ಲ್ಯುಡಿ ಎಇಇ ಅರುಣಕುಮಾರ ವಡಗೇರಿ ತಿಳಿಸಿದರು.
ಈ ಕಾಮಗಾರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಮಂಜೂರಾತಿ ದೊರಕಿದ ಮೇಲೆ ಟೆಂಡರ್ ಆಗಬೇಕಾದರೆ ಸಮಯವೇ ಬೇಕಾಗುತ್ತದೆ. ಅಲ್ಲಿಯ ವರೆಗೆ ಸಾರ್ವಜನಿಕರು, ವ್ಯಾಪಾರಸ್ಥರು, ಆಸ್ಪತ್ರೆಯವರಿಗೆ ತೊಂದರೆ ತಪ್ಪಿದ್ದಲ್ಲ. ಹೀಗಾಗಿ ತುರ್ತಾಗಿ ತಾತ್ಪೂರ್ತಿಕವಾಗಿಯಾದರೂ ಸಂಚಾರ ಸುಗಮಗೊಳ್ಳಲು ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪುರಸಭೆ ಅಧ್ಯಕ್ಷ, ಮುಖ್ಯಾಧಿಕಾರಿ, ವಾರ್ಡ್ ಸದಸ್ಯ ಅವರ ಪ್ರತಿಕ್ರಿಯೆಗಾಗಿ ಫೋನ್ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.
ಸ್ವಾಮಿ ವಿವೇಕಾನಂದ ವೃತ್ತದಿಂದ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಟಿಪ್ಪುಸುಲ್ತಾನ ವೃತ್ತದವರೆಗೆ ರಸ್ತೆ, ಚರಂಡಿ ಮತ್ತು ಪುರಸಭೆ ಕಾರ್ಯಾಲಯದ ಬಳಿ ಇರುವ ಸೇತುವೆ ನಿರ್ಮಾಣಕ್ಕಾಗಿ ₹ 2.50 ಕೋಟಿ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ.-ಅರುಣಕುಮಾರ ವಡಗೇರಿ, ಎಇಇ, ಪಿಡಬ್ಲ್ಯುಡಿ, ಸಿಂದಗಿ ಉಪವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.