ಸಿಂದಗಿ: ದಿ ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್ ಸೆ.20ರಂದು ಷಷ್ಠ್ಯಿಪೂರ್ತಿ(61ನೇ ವರ್ಷ) ಆಚರಿಸಿಕೊಳ್ಳುತ್ತಿದ್ದು, ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದ್ದ ₹50 ಲಕ್ಷ ಸಾಲವನ್ನು ₹1 ಕೋಟಿ ಹೆಚ್ಚಿಸಲಾಗುವುದು. ಬಡ್ಡಿ ಕೇವಲ ಶೇ 1ರಷ್ಟು ಮಾತ್ರ ಆಕರಣೆ ಮಾಡಲಾಗುವುದು. ಈಗಾಗಲೇ ಆರು ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲಿಯೇ ವಿಜಯಪುರದಲ್ಲಿ ಹೊಸ ಶಾಖೆ ಪ್ರಾರಂಭಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಶರಣಪ್ಪ ವಾರದ ಹೇಳಿದರು.
ಪಟ್ಟಣದ ಬ್ಯಾಂಕ್ ಸಭಾಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024-25ನೇ ಅಂತ್ಯಕ್ಕೆ ಬ್ಯಾಂಕ್ ಒಟ್ಟು 8079 ಸದಸ್ಯರನ್ನು ಹೊಂದಿದ್ದು, ₹5.16 ಕೋಟಿ ಶೇರು ಬಂಡವಾಳ, ಬ್ಯಾಂಕಿನ ಸ್ವಂತ ನಿಧಿಗಳು ₹11.75 ಕೋಟಿ ತಲುಪಿದೆ. ಒಟ್ಟಾರೆಯಾಗಿ ₹16.91 ಕೋಟಿ ಸ್ವಂತ ಬಂಡವಾಳ ಇದೆ. ₹108 ಕೋಟಿ ಠೇವಣಿ ಒಳಗೊಂಡಿದೆ. ಇದುವರೆಗೆ ಬ್ಯಾಂಕ್ ಗ್ರಾಹಕರಿಗೆ ವಿತರಿಸಿದ ಸಾಲ ₹72 ಕೋಟಿ ಪೂರ್ಣಗೊಂಡಿದೆ ಎಂದರು.
ಈ ಬಾರಿ ಬ್ಯಾಂಕ್ ಎನ್ಪಿಎ ಸಾಲಗಳನ್ನು ಕಡಿಮೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ₹9.54 ಕೋಟಿ ಎನ್ಪಿಎ ಸಾಲಗಳಿದ್ದು, ಒಟ್ಟು ಎನ್ಪಿಎ ಶೇ 13.26 ಗೆ ಇಳಿದಿದೆ. ಬ್ಯಾಂಕ್ ತನ್ನ ಹೆಚ್ಚುವರಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಾಂಡುಗಳಲ್ಲಿ ತೊಡಗಿಸಿದೆ. ಒಟ್ಟು ₹44.50 ಕೋಟಿ ವಿವಿಧ ಬ್ಯಾಂಕ್ ಮತ್ತು ಸರ್ಕಾರಿ ಬಾಂಡಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.
ರಿಸರ್ವ್ ಬ್ಯಾಂಕ್ ನಿಯಮಗಳಂತೆ ಸಿಆರ್‌ಆರ್ ಮತ್ತು ಎಸ್ಎಲ್ಆರ್ ಅನುಪಾತಗಳನ್ನು ತಪ್ಪದೇ ಪಾಲಿಸುತ್ತಾ ಬಂದಿದೆ. ಸಿಆರ್‌ಆರ್ ಕನಿಷ್ಠ ಶೇ 9ರಷ್ಟಿರಬೇಕಿದ್ದು, ನಮ್ಮ ಬ್ಯಾಂಕ್ ಶೇ 16.51 ಹೊಂದಿದೆ ಎಂದರು.
ಬ್ಯಾಂಕ್ ಆರು ಶಾಖೆಗಳು ಲಾಭದಲ್ಲಿವೆ. ಬ್ಯಾಂಕ್ ತೆರಿಗೆ ಪಾವತಿಸಿದ ನಂತರ ₹1.1 ಕೋಟಿ ಲಾಭ ಗಳಿಸಿದೆ. ಬ್ಯಾಂಕ್ ನ ನಿರ್ದೇಶಕರು, ಗ್ರಾಹಕರ ಸಹಕಾರದಿಂದ ಬ್ಯಾಂಕ್ ‘ಎ’ ಗ್ರೇಡ್ ಪಡೆದುಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ ಕೋರಿ, ನಿರ್ದೇಶಕ ಷಣ್ಮುಖಪ್ಪ ಸಂಗಮ, ಮಹಾದೇವಪ್ಪ ಸಿಂದಗಿ, ರವಿಕುಮಾರ ನಾಗೂರ, ಸುರೇಶಬಾಬು ಜೋಗೂರ, ಸಿದ್ಲಿಂಗಪ್ಪ ವಡ್ಡೋಡಗಿ, ಬಾಬು ಕಮತಗಿ, ನೀಲಕಂಠ ಗುಣಾರಿ ಹಾಗೂ ಪ್ರಧಾನ ವ್ಯವಸ್ಥಾಪಕ ಬಸವರಾಜ ದೇವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.