ಆಲಮಟ್ಟಿ ಜಲಾಶಯಕ್ಕೆ ಮೊಟ್ಟ ಮೊದಲ ಬಾರಿಗೆ ಬಾಗಿನ ಅರ್ಪಿಸಿದ ಆಗಿನ ಮುಖ್ಯಮಂತ್ರಿ
(ಸಂಗ್ರಹ ಚಿತ್ರ)
ಆಲಮಟ್ಟಿ: ಆಲಮಟ್ಟಿ ಜಲಾಶಯ ಗರಿಷ್ಠ ಮಟ್ಟಕ್ಕೆ ನೀರು ನಿಲ್ಲಿಸಿದ್ದು, ಆಲಮಟ್ಟಿ ವಿದ್ಯುತ್ ಉತ್ಪಾದನೆಗೆ ಶಂಕು ಸ್ಥಾಪನೆ, ಮೊದಲ ಘಟಕದ ಉದ್ಘಾಟನೆ, ಜಲಾಶಯಕ್ಕೆ ಬಾಗಿನ ಅರ್ಪಣೆಯ ಪರಂಪರೆ ಆರಂಭ ಹೀಗೆ ಈ ಭಾಗದ ಹಲವು ಪ್ರಥಮಗಳಿಗೆ ಕಾರಣಿಕರ್ತರಾಗಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ.
1970ರ ದಶಕಗಳಿಂದ ಕುಂಟುತ್ತಾ ಸಾಗಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿ, ಅದರಲ್ಲೂ ಮುಖ್ಯವಾಗಿ ಆಲಮಟ್ಟಿ ಜಲಾಶಯ ಪೂರ್ಣಗೊಂಡಿದ್ದು ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. 2002ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ಗರಿಷ್ಟ ಮಟ್ಟ 519.60ಮೀ ಎತ್ತರದವರೆಗೆ ನೀರು ನಿಲ್ಲಿಸಲಾಗಿತ್ತು. ಇದರ ಹಿಂದೆ ಎಸ್.ಎಂ. ಕೃಷ್ಣರವರ ದೃಢ ನಿರ್ಧಾರ, ಪೂರ್ಣಗೊಳಿಸುವ ತುಡಿತ ಅಡಗಿತ್ತು ಎನ್ನುತ್ತಾರೆ ಅನೇಕ ಅಧಿಕಾರಿಗಳು.
ಆ ಸಮಯದಲ್ಲಿ ರಾಜ್ಯದಲ್ಲಿ ಕಾವೇರಿಗೆ ಮಾತ್ರ ಬಾಗಿನ ಅರ್ಪಿಸಲಾಗುತ್ತಿದ್ದು, ಕೃಷ್ಣಾ ನದಿಗೆ ಬಾಗಿನದ ಯಾವುದೇ ಪ್ರಸ್ತಾಪವೂ ಇರಲಿಲ್ಲ. ಆಗ ಈ ಭಾಗದ ರೈತರ ಬೇಡಿಕೆ ಮನ್ನಿಸಿ ಸರ್ಕಾರದ ವತಿಯಿಂದ ಕೃಷ್ಣಾ ನದಿಗೂ ಬಾಗಿನ ಅರ್ಪಿಸುವ ನಿರ್ಣಯ ಕೈಗೊಂಡು 2002 ಸೆಪ್ಟೆಂಬರ್ ತಿಂಗಳಲ್ಲಿ ಮೊದಲು ಬಾಗಿನ ಅರ್ಪಿಸುವ ಪರಂಪರೆ ಆರಂಭಿಸಿದ ಶ್ರೇಯಸ್ಸು ಎಸ್.ಎಂ ಕೃಷ್ಣಾ ಅವರಿಗೆ ಸಲ್ಲುತ್ತದೆ. ಮುಂದೆ ಅವರೇ 2003ರಲ್ಲಿಯೂ ಸೇರಿ ಒಟ್ಟಾರೆ ಎರಡು ಬಾರಿ ಕೃಷ್ಣೆಗೆ ಬಾಗಿನ ಅರ್ಪಿಸಿದ್ದಾರೆ.
ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ:
ಆಲಮಟ್ಟಿಯಲ್ಲಿ ಜಲ ವಿದ್ಯುತ್ ಉತ್ಪಾದನೆ ಆರಂಭಿಸಬೇಕು ಎನ್ನುವ ಪ್ರಸ್ತಾಪವಿತ್ತು. ಮೊದಲು ಈ ಘಟಕದ ನಿರ್ಮಾಣವನ್ನು ಚಾಮುಂಡೇಶ್ವರಿ ಕನ್ಸಟ್ರಕ್ಷನ್ ಅವರಿಗೆ ನೀಡಲು ಮೊದಲಿನ ಸರ್ಕಾರ ನಿರ್ಧರಿಸಿತ್ತು. ಆದರೆ ಎಸ್.ಎಂ. ಕೃಷ್ಣ ಆ ಪ್ರಸ್ತಾಪವನ್ನು ರದ್ದುಗೊಳಿಸಿ, ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ವಿದ್ಯುತ್ ಉತ್ಪಾದನಾ ನಿಗಮಕ್ಕೆ ನೀಡಿದರು.
ವಿದ್ಯುತ್ ಘಟಕ ನಿರ್ಮಾಣಕ್ಕಾಗಿ 15 ಮಾರ್ಚ್ 2002ರಲ್ಲಿ ಆಲಮಟ್ಟಿಗೆ ಆಗಮಿಸಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಎರಡೇ ವರ್ಷದಲ್ಲಿ 23 ಮಾರ್ಚ್ 2004 ರಂದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೊದಲ ಘಟಕವನ್ನು ಬೆಂಗಳೂರಿನಲ್ಲಿ ಕುಳಿತು ಬಟನ್ ಒತ್ತುವ ಮೂಲಕ ಚಾಲನೆ ನೀಡಿದ್ದರು.
ಇವುಗಳ ಜತೆಗೆ ಆಲಮಟ್ಟಿಯಲ್ಲಿ ಕೃಷ್ಣಾ ಉದ್ಯಾನ , ಮೊಘಲ್, ಇಟಾಲಿಯನ್ ಉದ್ಯಾನ ನಿರ್ಮಾಣಕ್ಕೂ ಅನುಮೋದನೆ ನೀಡಿದ್ದರು. ಯುಕೆಪಿ ಯೋಜನೆಯ ಆಲಮಟ್ಟಿ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ಮುಳವಾಡ ಏತ ನೀರಾವರಿ ಯೋಜನೆಯ ಹಂತ 2 ಸೇರಿ ನಾನಾ ಕಾಮಗಾರಿಗಳಿಗೂ ವಿಶೇಷ ಅನುದಾನ ನೀಡಿದ್ದಾರೆ.
ಎಸ್.ಎಂ ಕೃಷಣಾ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಲಮಟ್ಟಿಗೆ ನಾಲ್ಕು ಬಾರಿ ಭೇಟಿ ನೀಡಿದಾಗಲೂ ಇಡೀ ದಿನ ರಾತ್ರಿವರೆಗೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯುಕೆಪಿ ಯೋಜನೆಗೆ ಚುರುಕು ಮುಟ್ಟಿಸಿದ್ದರು. ಆದರೆ ಈಗ ಆ ಪರಂಪರೆ ಹೊರಟು ಹೋಗಿದೆ ಎನ್ನುತ್ತಾರೆ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ.
‘ಕೃಷ್ಣೆಗೆ ಮುಖ್ಯಮಂತ್ರಿಗಳೇ ಬಾಗಿನ ಅರ್ಪಿಸಬೇಕೆಂಬ ಹೋರಾಟ ಆರಂಭಿಸಿದ್ದೇವು. ಜಿಲ್ಲಾಪಂಚಾಯಿತಿಯಿಂದ ಠರಾವು ಮಾಡಿಸಿದ್ದೆ. ಇದನ್ನು ಗಮನಿಸಿದ್ದ ಎಸ್,ಎಂ ಕೃಷ್ಣ ಅವರು ಆಲಮಟ್ಟಿಗೆ ಬಂದು ಬಾಗಿನ ಅರ್ಪಿಸಿದ್ದರು. ಅದಕ್ಕಾಗಿ ಹೋರಾಟ ಮಾಡಿದ್ದ ನನ್ನ ಬೆನ್ನು ಚಪ್ಪರಿಸಿ ಅಭಿಮಾನದ ಮಾತುಗಳನ್ನಾಡಿದ್ದರು’ ಎಂದು ಬಸವರಾಜ ಕುಂಬಾರ 2002ರ ಘಟನೆಯನ್ನು ಮೆಲುಕು ಹಾಕಿದರು.
ಎಂಜಿನಿಯರ್‌ಗಳ ನೇಮಕಾತಿ: ಯುಕೆಪಿ ಯೋಜನೆ ಶೀಘ್ರವಾಗಿ ಪೂರ್ಣಗೊಳ್ಳಲು ಸ್ಥಳೀಯ ಎಂಜಿನಿಯರ್‌ಗಳ ನೇಮಕ ಅಗತ್ಯ ಎಂದು ಮನಗಂಡು 1993ರಲ್ಲಿ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ 419 ಜನ ಈ ಭಾಗದ ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಿದರು. ಮುಂದೆ ಅವರೇ 2002 ರಲ್ಲಿ ಮುಖ್ಯಮಂತ್ರಿ ಯಾಗಿದ್ದಾಗ ಗುತ್ತಿಗೆ ಆಧಾರದಲ್ಲಿದ್ದ ಎಂಜಿನಿಯರ್‌ಗಳನ್ನು ವಿಧಾನಸಭೆಯಲ್ಲಿ ವಿಶೇಷ ವಿಧೇಯಕ ಮಂಡಿಸಿ 419 ಎಂಜಿನಿಯರ್‌ಗಳನ್ನು ಕಾಯಂಗೊಳಿಸಿದ್ದರು ಎಂದು ನಿವೃತ್ತ ಎಂಜಿನಿಯರ್ ಎ.ಎಚ್. ಬಿಲವಾಡ ಮಾಹಿತಿ ನೀಡಿದರು.
ನೀರಾವರಿಗೆ ಕೃಷ್ಣ ಕಾರಣ: ಮೊದಲಿನ ನೀರಾವರಿ ಸಚಿವ ಕೆ.ಎನ್.ನಾಗೇಗೌಡ ಅವರ ತಪ್ಪು ಹೇಳಿಕೆಯಿಂದ ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸಿ ಆಲಮಟ್ಟಿ ಜಲಾಶಯದ 519.60 ಮೀ ಎತ್ತರದವರೆಗೂ ನೀರು ನಿಲ್ಲಿಸುವ ಅನಿಶ್ಚಿತತೆ ಕಾಡಿತ್ತು. ಮುಂದೆ ಮುಖ್ಯಮಂತ್ರಿಯಾದ ಎಸ್.ಎಂ. ಕೃಷ್ಣ ಸುಪ್ರೀಂಕೋರ್ಟ್ ಗೆ ಹಾಜರಾಗಿ ಕ್ಷಮಾಪಣೆ ಕೇಳಿ, ಆಲಮಟ್ಟಿ ಜಲಾಶಯ 519.60 ಮೀ ಎತ್ತರದವರೆಗೆ ನೀರು ನಿಲ್ಲಿಸಲು ಅನುಮತಿ ಪಡೆದರು. ಮುಂದೆ ಜಲಾಶಯದ ಗೇಟ್ ಕತ್ತರಿಸಿ 519.60 ಮೀವರೆಗೆ ನೀರು ಸಂಗ್ರಹಿಸಿದ್ದು ಅವರ ಅವಧಿಯಲ್ಲಿಯೇ ಎಂಬುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.