ವಿಜಯಪುರ: ‘ಕಾಂಗ್ರೆಸ್‌ಗೆ ತಾಕತ್ತಿದ್ದರೆ ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡಲಿ ಎಂದು ಬಿಜೆಪಿ, ಸಂಘಪರಿವಾರದ ಮುಖಂಡರು ಸವಾಲು ಹಾಕುತ್ತಿದ್ದಾರೆ. ತಾಕತ್ತು ಇದ್ದ ಕಾರಣಕ್ಕೆ ಆರ್‌ಎಸ್‌ಎಸ್ ಅನ್ನು ಈ ಹಿಂದೆ ನಾಲ್ಕು ಬಾರಿ ದೇಶದಲ್ಲಿ ನಿಷೇಧ ಹೇರಲಾಗಿತ್ತು. ಈಗಲೂ ಆರ್‌ಎಸ್‌ಎಸ್‌ನ ವಿರುದ್ಧ ಸಮಯ, ಸಂದರ್ಭ, ಸಾಕ್ಷಾಧಾರಗಳು ಸಿಕ್ಕರೆ ಮತ್ತೆ ನಿಷೇಧವಾಗಲಿದೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ನಡೆಸುವ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ, ಸಚಿವರ ಪತ್ರದ ಸಾರಾಂಶವನ್ನು ಬಿಜೆಪಿ, ಸಂಘ ಪರಿವಾರದವರು ತಿರುಚಿ, ತಾಕತ್ತಿದ್ದರೆ ಆರ್‌ಎಸ್ಎಸ್ ನಿಷೇಧ ಮಾಡಿ ಎಂದು ಸವಾಲು ಹಾಕುತ್ತಿದ್ದಾರೆ’ ಎಂದರು.
‘ತಮಿಳುನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಬೈಠಕ್, ಸಭೆ, ಸಮಾರಂಭ, ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ನಿರ್ಬಂಧ ಹೇರಲು ಈಗಾಗಲೇ ಮುಖ್ಯಮಂತ್ರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ’ ಎಂದರು.
‘ಆರ್‌ಎಸ್‌ಎಸ್ ಈ ದೇಶದ ಕಾನೂನು ಅನ್ವಯ ಇದುವರೆಗೂ ನೋಂದಣಿ ಆಗದ ಸಂಘಟನೆಯಾಗಿದೆ. ಇದು ಕೇವಲ ಸಮಾಜವೊಂದರ ಗುಂಪು, ಅದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬ ಲೆಕ್ಕವಿಲ್ಲ’ ಎಂದು ಹೇಳಿದರು.
‘ಆರ್‌ಎಸ್‌ಎಸ್‌ನವರು ಲಾಟಿ ಹಿಡಿದುಕೊಂಡು ಓಣಿ, ಓಣಿಗಳಲ್ಲಿ ಪಥಸಂಚಲನ ಮಾಡುವುದರ ಅರ್ಥವೇನು? ಅದರಿಂದ ದೇಶಕ್ಕೆ ಏನಾದರೂ ಪ್ರಯೋಜನವಾಗಿದೆಯೇ? ದೇಶದ ಜನರಲ್ಲಿ ಭಯಹುಟ್ಟಿಸಲು ಕೈಯಲ್ಲಿ ಲಾಟಿ ಹಿಡಿದು ಪಥ ಸಂಚಲನ ಮಾಡುತ್ತಿದ್ದಾರೆ. ಯಾವ ಸಭ್ಯಸ್ಥರು, ದೇಶಪ್ರೇಮಿಗಳು ಕೈಯಲ್ಲಿ ಲಾಟಿ ಹಿಡಿಯಲು ಸಾಧ್ಯವಿಲ್ಲ, ಇದು ಭಯೋತ್ಪಾದನಾ ಚಟುವಟಿಕೆ ಸಂಕೇತವಾಗಿದೆ’ ಎಂದು ಹೇಳಿದರು.
‘ಆರ್‌ಎಸ್‌ಎಸ್‌ನ ಅನೇಕರ ಮನೆಯಲ್ಲಿ ಈ ಹಿಂದೆ ಬಾಂಬ್ ತಯಾರಿಸುತ್ತಿದ್ದ ಸಾಕ್ಷ್ಯಗಳು ಸಿಕ್ಕಿವೆ. ಆರ್‌ಎಸ್ಎಸ್‌ನ ಅನೇಕರು ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿ, ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಉದಾಹರಣೆ ಇದೆ’ ಎಂದು ಹೇಳಿದರು.
‘ಈ ದೇಶ ಶಾಂತಿಯಿಂದ ಇರಬಾರದು, ಭಯೋತ್ಪಾದನಾ ಚಟುವಟಿಕೆಗಳು, ದಂಗೆಗಳು ನಡೆಯಬೇಕು ಎಂದು ಆರ್‌ಎಸ್‌ಎಸ್ ಬಯಸುತ್ತಿದೆ. ಕೋಮುವಾದ ಹುಟ್ಟುಹಾಕುತ್ತಿರುವುದೇ ಸಂಘಪರಿವಾರ’ ಎಂದು ಆರೋಪಿಸಿದರು.
ಶರಣ ಚಿಂತಕ ಡಾ.ಜೆ.ಎಸ್.ಪಾಟೀಲ, ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಮುಖ ಡಾ.ರವಿ ಬಿರಾದಾರ, ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಹರನಾಳ, ಪ್ರಭು ಪಾಟೀಲ ಇದ್ದರು.
ಆರ್‌ಎಸ್‌ಎಸ್ ಹುಟ್ಟಿ ನೂರು ವರ್ಷ ಆಗಿದೆ. ಈ ಅವಧಿಯಲ್ಲಿ ದೇಶದ ಹಿತಕ್ಕಾಗಿ ಸಂಘ ಪರಿವಾರ ಮಾಡಿರುವ ಕನಿಷ್ಠ 10 ಕೆಲಸಗಳನ್ನು ಬಹಿರಂಗ ಪಡಿಸಲಿ.ಎಸ್.ಎಂ.ಪಾಟೀಲ ಗಣಿಹಾರ, ಕೆಪಿಸಿಸಿ ವಕ್ತಾರ
ವಿಜಯಪುರ ಬಂದ್‌ಗೆ ಬೆಂಬಲ
ವಿಜಯಪುರ: ಸಿಜೆಐ ವಿರುದ್ಧ ವಕೀಲ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಧರ್ಮಾತೀತವಾಗಿ ಅ.16ರಂದು ನಡೆಯಲಿರುವ ವಿಜಯಪುರ ಬಂದ್ ಮತ್ತು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಈ ದೇಶದ ಸಂವಿಧಾನದ ಮೇಲೆ ವಿಶ್ವಾಸ ಇರುವವರು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇರುವವರು ಈ ದೇಶ ಕೋಮುವಾದಿಗಳ ಕೈಯಿಂದ ರಕ್ಷಿಸಬೇಕು ಎಂಬ ಮನಸ್ಥಿತಿ ಇರುವ ಹಿಂದುಳಿದವರು ಮುಂದುಳಿದವರು ಪ್ರಗತಿಪರರು ಸಾಹಿತಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಎಸ್.ಎಂ.ಪಾಟೀಲ ಗಣಿಹಾರ ಮನವಿ ಮಾಡಿದರು.
ಆರ್‌ಎಸ್‌ಎಸ್ ಮುಸ್ಲಿಮರನ್ನು ಬಹಿರಂಗವಾಗಿ ವಿರೋಧಿಸುತ್ತಿದೆಯಾದರೂ ಅದರ ನೈಜ ಗುರಿ ಮುಸ್ಲಿಮರಲ್ಲ. ತೋರಿಕೆಗಾಗಿ ಮಾತ್ರ ಮುಸ್ಲಿಮರನ್ನು ವಿರೋಧಿಸುತ್ತಿದೆ. ಈ ದೇಶದ ದಲಿತರನ್ನು ಬಗ್ಗು ಬಡಿಯಲು ಆರ್‌ಎಸ್‌ಎಸ್ ಹವಣಿಸುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.