
ಸೋಲಾಪುರ: ನಗರದ ಸಿದ್ಧೇಶ್ವರ ಮಂದಿರ ಆವರಣದ ಸಮ್ಮತಿ ಕಟ್ಟೆಯಲ್ಲಿ ಶಿವಯೋಗಿ ಸಿದ್ಧೇಶ್ವರರ ಅಕ್ಷತಾ ಕಾರ್ಯಕ್ರಮವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಪನ್ನಗೊಂಡಿತು.
ಬೆಳಿಗ್ಗೆ 8 ಗಂಟೆಗೆ ಮಾನಕರಿ ಹೀರೆಹಬ್ಬು ವಾಡೆದಲ್ಲಿ ಏಳು ನಂದಿ ಧ್ವಜಗಳಿಗೆ ಪೂಜೆ ನೆರವೇರಿಸಲಾಯಿತು. ಸಿದ್ಧೇಶ್ವರರ ಪ್ರತಿಮೆ ಇದ್ದ ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೆರವಣಿಗೆ ಜರುಗಿತು. ವಾದ್ಯಮೇಳದೊಂದಿಗೆ ಹಾಗೂ ಭಕ್ತರ ಜಯ ಘೋಷ ಮೆರುಗು ತಂದಿತು. ಮಧ್ಯಾಹ್ನ ದೇವಸ್ಥಾನದ ಆವರಣ ತಲುಪಿತು.
ಮಾನಕರಿ ಹೀರೆಹಬ್ಬು ಹಾಗೂ ದೇಶಮುಖ ಕುಟುಂಬದವರು ಗಂಗಾ ಪೂಜೆ ಹಾಗೂ ಸುಗುಡಿ ಪೂಜೆ ನೆರವೇರಿಸಿದರು. ಸುಹಾಸ ಶೇಠೆ ಅವರು, ‘ಸತ್ಯಂ ಸತ್ಯಂ ದಿಡಂ ದಿಡಂ’ ಸಮ್ಮತಿ ವಾಚನ ಮಾಡಿದರು. ಭಕ್ತರು, ಸಿದ್ಧರಾಮೇಶ್ವರರ ಯೋಗದಂಡದೊಂದಿಗೆ ಕುಂಬಾರ ಕನ್ಯೆಯ ವಿವಾಹ ಅಕ್ಷತಾರೋಹಣ ಮಾಡಿದರು.
‘25 ಮುಸ್ಲಿಮರು ಸಮ್ಮತಿ ಕಟ್ಟೆಯನ್ನು ಐದು ಪ್ರಕಾರದ ಸಾವಿರಾರು ಕೆ.ಜಿ. ಪುಷ್ಪಗಳು, ತಳಿರು ತೋರಣಗಳಿಂದ ಅಲಂಕರಿಸಿದರು. ಯೋಗ ಸಮಾಧಿಯನ್ನು 400 ಕೆ.ಜಿ. ನಿಂಬೆ, 10 ಚೀಲ ಗಜ್ಜರಿ, ಮೂರು ಚೀಲ ಸಪೋಟ, ತಲಾ ಮೂರು ಕೆ.ಜಿ. ಕ್ಯಾರೆಟ್, ಪೇರಲ ಹಾಗೂ ಸೇಬು ಹಣ್ಣು, 50 ಕೆ.ಜಿ. ಸಂತ್ರಾ ಹಣ್ಣುಗಳಿಂದ ಅಲಂಕರಿಸಲಾಗಿದೆ’ ಎಂದು ಸೇವಾಧಾರಿ ವಿಶ್ವನಾಥ ಸ್ವಾಮಿ ಹೇಳಿದರು.
ನಂತರ ಸಪ್ತ ನಂದಿ ಧ್ವಜಗಳು ಅಮೃತಲಿಂಗಕ್ಕೆ ತೆರಳಿದವು. ಸಿದ್ಧೇಶ್ವರ ಮೂರ್ತಿಗೆ ಅಭಿಷೇಕ ಜರುಗಿತು. ಸಂಜೆ 68 ಶಿವಲಿಂಗಗಳಿಗೆ ಪ್ರದಕ್ಷಿಣೆ ಹಾಕಿದ ನಂತರ ನಂದಿ ಧ್ವಜಗಳು ಹಿರೇಹಬ್ಬು ವಾಡೆಗೆ ತೆರಳಿದವು. ಬಾರಾಬಂದಿ, ಧೋತರ, ತಲೆಯ ಮೇಲೆ ಬಿಳಿ ಪೇಠಾ, ಇಳಕಲ್ ಸೀರೆ ಧರಿಸಿ ಭಕ್ತರು ಪಾಲ್ಗೊಂಡಿದ್ದರು.
ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶದಿಂದ ಭಕ್ತರು ಆಗಮಿಸಿದ್ದರು. ಜಾತ್ರಾ ಸಮಿತಿಯಿಂದ ಎಲ್ಇಡಿ ಪರದೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಸಂಸದೆ ಪ್ರಣಿತಿ ಶಿಂಧೆ, ಮಾಜಿ ಸಂಸದ ಜಯಸಿದ್ದೇಶ್ವರ ಸ್ವಾಮೀಜಿ, ಕಾಂಗ್ರೆಸ್ ನಾಯಕಿ ಉಜ್ವಲಾ ಶಿಂಧೆ, ಶಾಸಕರಾದ ವಿಜಯಕುಮಾರ ದೇಶಮುಖ, ಸುಭಾಷ ದೇಶಮುಖ, ಸಚಿನ ಕಲ್ಯಾಣಶೆಟ್ಟಿ, ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಪೊಲೀಸ್ ಕಮಿಷನರ್ ಎಂ. ರಾಜಕುಮಾರ, ಮಹಾನಗರ ಪಾಲಿಕೆ ಆಯುಕ್ತ ಸಚಿನ ಓಂಬಾಸೆ, ಸಿದ್ದೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಧರ್ಮರಾಜ ಕಾಡಾದಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಜರಿದ್ದರು.
ಸಹಬಾಳ್ವೆ ತತ್ವ ಸಾರಿದ ಶಿವಯೋಗಿ
‘ಶಿವಯೋಗಿ ಸಿದ್ಧೇಶ್ವರರು ಸರ್ವಧರ್ಮ ಸಹಬಾಳ್ವೆಯ ತತ್ವ ಸಾರಿದರು. ಜಾತಿ ಮತ ಪಂಥ ಧರ್ಮವೆನ್ನದೆ ಭಕ್ಯರೆಲ್ಲ ಸೇರಿ ಸಿದ್ಧರಾಮೇಶ್ವರ ಜಾತ್ರೆಯನ್ನು ಅತಿ ಉತ್ಸಾಹದಿಂದ ನೆರವೇರಿಸಿದ್ದು ಆನಂದ ಉಂಟು ಮಾಡಿದೆ’ ಎಂದು ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿ ‘ಭಕ್ತರಿಗೆ ಆಸನ ವ್ಯವಸ್ಥೆ ಆಗಮನ ಮತ್ತು ನಿರ್ಗಮನ ಅನ್ನದಾಸೋಹ ವ್ಯವಸ್ಥೆಯನ್ನು ಯಾವುದೇ ತೊಂದರೆಯಾಗದಂತೆ ನಿರ್ವಹಿಸಲಾಗಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.