ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ
ಸೋಲಾಪುರ: ಜಿಲ್ಲೆಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಸೀನಾ ನದಿ ಉಕ್ಕಿ ಹರಿಯುತ್ತಿದ್ದು, ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಬಂದಿರುವುದರಿಂದ ಎರಡು ರಾಜ್ಯಗಳ ನಡುವಿನ ಸಂಚಾರ ಬಂದ್ ಆಗಿದೆ.
ದಕ್ಷಿಣ ಸೋಲಾಪುರ ತಾಲ್ಲೂಕಿನ ವಾಂಗಿ, ರಾಜೂರ, ಅಕೋಲೆ, ಸಿಂಧಖೇಡ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ರಾಜೂರದಲ್ಲಿ ಸುಮಾರು 25 ಜನರು ಹಾಗೂ ನದಿ ದಂಡೆಯಲ್ಲಿರುವ ಗ್ರಾಮದ 1035 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ವಾಂಗಿ, ವಡಕಬಾಳ ಹಾಗೂ ರಾಜೂರ ಜನರು ಮನೆ ತೊರೆದು ಬಿರನಾಳ ಹಾಗೂ ಸೋಲಾಪುರದಲ್ಲಿ ಆಶ್ರಯ ಪಡೆದಿದ್ದಾರೆ. ವಾಂಗಿಯಲ್ಲಿರುವ ಶೇ 90ರಷ್ಟು ಜನರು ಹೊಲದಲ್ಲಿ ವಾಸಿಸುತ್ತಾರೆ. ಪ್ರವಾಹ ಪೀಡಿತ ಗ್ರಾಮಸ್ಥರು ಶಾಲೆ ಹಾಗೂ ಇತರ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಂಸದೆ ಪ್ರಣೀತಿ ಶಿಂಧೆ ಹಾಗೂ ಶಾಸಕ ಸುಭಾಷ ದೇಶಮುಖ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಉತ್ತರ ಸೋಲಾಪುರ ತಾಲ್ಲೂಕಿನ ಪಾಕಣಿ, ಶಿವಣಿ, ತೆರೆ ಹಾಗೂ ತೆಲಗಾವ ಗ್ರಾಮಗಳು ಜಲಾವೃತಗೊಂಡಿದ್ದು, ಸುಮಾರು 250 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉತ್ತರ ಸೋಲಾಪುರ ತಾಲ್ಲೂಕಿನ ತಹಶೀಲ್ದಾರ್ ನೀಲೇಶ ಪಾಟೀಲ ನೇತೃತ್ವದಲ್ಲಿ ಕಂದಾಯ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಭರದಿಂದ ಪರಿಹಾರ ಕಾರ್ಯನಿರ್ವಹಿಸಿದ್ದು ಪೀಡಿತ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಸ್ಥಾನಿಕ ಪುನರ್ವಸತಿ ಕೇಂದ್ರಗಳಲ್ಲಿ ಇರಿಸಿದ್ದಾರೆ.
ಬುಧವಾರ ಜಿಲ್ಲೆಯ ಪ್ರವಾಹ ಪೀಡಿತ ಮಾಢಾ ತಾಲ್ಲೂಕಿಗೆ ಭೇಟಿ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಿದರು. ರೈತರಿಗೆ ತಕ್ಷಣ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಫಡಣವಿಸ್, ತೊಂದರೆಗೆ ಒಳಗಾಗಿರುವ ರೈತರಿಗೆ ಸಹಾಯ ಮಾಡಲು ನಾವು ಹಿಂದೆ ಸರಿಯುವುದಿಲ್ಲ. ಪರಿಹಾರ ನೀಡುವಾಗ ಹೆಚ್ಚಿನ ಮಾನದಂಡಗಳನ್ನು ವಿಧಿಸುವುದಿಲ್ಲ. ಅಗತ್ಯವಿರುವ ಕಡೆಗಳಲ್ಲಿ ಮಾನದಂಡಗಳನ್ನು ಸಡಿಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯನ್ನು ವಿವರಿಸಿದರು. ಆಹಾರಧಾನ್ಯ, ಜಾನುವಾರುಗಳು, ಬೆಳೆ, ಮನೆ ಎಲ್ಲವನ್ನು ಕಳೆದುಕೊಂಡಿದ್ದೇವೆ. ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.