ADVERTISEMENT

ಹಿಂಗಾರು ಬಿತ್ತನೆ; ಶೇ 76 ಪೂರ್ಣ

ಬಿಡುವು ನೀಡಿದ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ; ರೈತರಲ್ಲಿ ಸಂತಸ

ಸುಭಾಸ ಎಸ್.ಮಂಗಳೂರ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST

ವಿಜಯಪುರ: ಅಕ್ಟೋಬರ್ ಕೊನೆಯ ಹಾಗೂ ನವೆಂಬರ್ ಮೊದಲ ವಾರದಲ್ಲಿ ಬಿಟ್ಟೂಬಿಡದೆ ಸುರಿದು ರೈತರಲ್ಲಿ ಆತಂಕ ಮೂಡಿಸಿದ್ದ ಮಳೆ ವಾರದಿಂದ ಬಿಡುವು ನೀಡಿದ್ದು, ರೈತರು ಉತ್ಸಾಹದಿಂದ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಒಟ್ಟು 5.25 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ 3.76 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಕಡಲೆ, ಬಿಳಿಜೋಳ ಮತ್ತು ಮುಸುಕಿನ ಜೋಳವನ್ನೇ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ.

1.84 ಲಕ್ಷ ಹೆಕ್ಟೇರ್ ಬಿಳಿಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ 1.12 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. 10 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ 4,233 ಹೆಕ್ಟೇರ್ ಬಿತ್ತನೆಯಾಗಿದೆ. 60 ಸಾವಿರ ಹೆಕ್ಟೇರ್ ಗೋಧಿ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ADVERTISEMENT

‘ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟ ಪರಿಣಾಮ ಉದ್ದು, ಹೆಸರು ಬಿತ್ತನೆ ಮಾಡಿರಲಿಲ್ಲ. ಜಮೀನನ್ನು ಖಾಲಿ ಬಿಟ್ಟಿದ್ದೆವು. ಹಿಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಂಡಾಗ ಮಳೆ ಬಿಡುವು ನೀಡಲಿಲ್ಲ. ಹೀಗಾಗಿ, ವಿಳಂಬವಾಗಿ ಬಿತ್ತನೆ ಮಾಡಿದ್ದೇನೆ. ವಿಳಂಬ ಬಿತ್ತನೆಯಿಂದ ಜೋಳ, ಕಡಲೆ ಕಾಳುಗಳು ಗಟ್ಟಿಯಾಗುವುದಿಲ್ಲ. ಇದರಿಂದ ಇಳುವರಿ ಕಡಿಮೆ ಬರುತ್ತದೆ’ ಎಂದು ವಿಜಯಪುರದ ರೈತ ಪ್ರಕಾಶ ಮುದನೂರ ಹೇಳಿದರು.

‘ಹಸ್ತ ಮಳೆ ಸಂದರ್ಭದಲ್ಲಿ ಬಿತ್ತನೆ ಮಾಡಿದ್ದ ಕಡಲೆ ರೋಗಕ್ಕೆ ತುತ್ತಾಗಿದೆ. ಹೀಗಾಗಿ, ಕೆಲವರು ಹರಗಿ ಮತ್ತೆ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಈ ಮೊದಲು ಬಿತ್ತನೆ ಮಾಡಿದಾಗ ಬರಬೇಕಾದಷ್ಟು ಇಳುವರಿ, ಎರಡನೇ ಬಾರಿ ಬಿತ್ತನೆ ಮಾಡಿದಾಗ ಬರುವುದಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಬಸವನಬಾಗೇವಾಡಿ ರೈತ ದಯಾನಂದ ಸೋಮನಾಳ ಹೇಳಿದರು.

‘ಜೋಳ ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದು, ಮಳೆ ಹೆಚ್ಚಾಗಿದ್ದರಿಂದ ಸುಳಿ ರೋಗ ಉಂಟಾಗಿದೆ. ಇದನ್ನು ನಿಯಂತ್ರಿಸಬಹುದಾಗಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.