ADVERTISEMENT

ನಮ್ಮ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡ್ರಿ...

ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆ ಮಕ್ಕಳ ಅಳಲು

ಅಮರನಾಥ ಹಿರೇಮಠ
Published 30 ಅಕ್ಟೋಬರ್ 2019, 16:02 IST
Last Updated 30 ಅಕ್ಟೋಬರ್ 2019, 16:02 IST
ದೇವರಹಿಪ್ಪರಗಿ ತಾಲ್ಲೂಕು ಭೈರವಾಡಗಿ ಗ್ರಾಮದ ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂಪೌಂಡ್ ಇಲ್ಲದಿರುವುದು
ದೇವರಹಿಪ್ಪರಗಿ ತಾಲ್ಲೂಕು ಭೈರವಾಡಗಿ ಗ್ರಾಮದ ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂಪೌಂಡ್ ಇಲ್ಲದಿರುವುದು   

ದೇವರಹಿಪ್ಪರಗಿ: ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಮೂಲಕ ಸಾಕಷ್ಟು ಅನುದಾನ ಲಭ್ಯವಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದಕ್ಕೆ ಭೈರವಾಡಗಿ ಗ್ರಾಮದ ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ.

2001-02ರಲ್ಲಿ ಈ ಶಾಲೆ ಆರಂಭವಾಗಿದೆ. ಆದರೆ, ಶೌಚಾಲಯ, ಕಾಂಪೌಂಡ್, ಸ್ಥಳೀಯ ನೀರಿನ ಮೂಲಗಳಿಂದ ಶಾಲೆ ವಂಚಿತವಾಗಿದೆ. ಸದ್ಯ ಶಾಲೆಯಲ್ಲಿ 8 ರಿಂದ 10 ನೇ ವರ್ಗದವರೆಗೆ ತರಗತಿಗಳು ಜರುಗುತ್ತಿದ್ದು, 115 ಮಕ್ಕಳು ಓದುತ್ತಿದ್ದಾರೆ. ಕಲಿಕೆಗೆ ಅಗತ್ಯವಾದ 10 ಸುಸಜ್ಜಿತ ಕೊಠಡಿಗಳು ಹಾಗೂ 6 ಶಿಕ್ಷಕರು ಸೇರಿದಂತೆ 8 ಜನ ಸಿಬ್ಬಂದಿ ಇದ್ದಾರೆ. ಪಾಠ ಪ್ರವಚನಗಳಿಗೆ ಕೊರತೆ ಇಲ್ಲ. ಆದರೆ, ನೀರು, ಶೌಚಕ್ಕಾಗಿ ಪರದಾಡುವಂತಾಗಿದೆ.

‘ಈ ಮೊದಲು ಕುಡಿಯುವ ನೀರಿಗಾಗಿ ಮಕ್ಕಳು ಸಮೀಪದ ಕೆರೆಗೆ ಹೋಗುವಂತಹ ಪರಿಸ್ಥಿತಿ ಇತ್ತು. ಈಗ ಗ್ರಾಮ ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಮಾಡಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ಗಿಡಮರ ಬೆಳೆಸಲು ಹಾಗೂ ಮಕ್ಕಳಿಗೆ ಕೈಕಾಲು ತೊಳೆಯಲು ಅಗತ್ಯವಾದ ಹೆಚ್ಚು ನೀರು ಸಿಗುತ್ತಿಲ್ಲ. ಆದ್ದರಿಂದ ಶಾಲೆಯ ಆವರಣದಲ್ಲಿರುವ ಕೊಳವೆಬಾವಿಯನ್ನು ದುರಸ್ತಿಗೊಳಿಸಬೇಕು. ವಿದ್ಯಾರ್ಥಿನಿ ಯರಿಗೆ ಸುಸಜ್ಜಿತ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಿಸಬೇಕು’ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳಾದ ರಾಮನಗೌಡ ಹಿರೇಗೌಡರ ಹಾಗೂ ಆದರ್ಶ ನಾಗೂರ ಹೇಳುತ್ತಾರೆ.

ADVERTISEMENT

‘ಶಾಲೆಯ ಕುಂದು–ಕೊರೆತೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ . ಮುಂದಿನ ದಿನಗಳಲ್ಲಿ ಈ ಕುರಿತು ಹೋರಾಟ ಮಾಡುತ್ತೇವೆ’ ಎಂದು ಅಶೋಕ ಬಿರಾದಾರ ಹೇಳುತ್ತಾರೆ.

‘ಕಾಂಪೌಂಡ್ ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಶಾಲೆಯ ನಾಲ್ಕು ಕೊಠಡಿಗಳು ದುರಸ್ತಿಯಾಗಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನ ಸೆಳೆಯಲಾಗುವುದು’ ಎಂದು ಮುಖ್ಯ ಶಿಕ್ಷಕ ಎಸ್.ವೈ.ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.